ನವದೆಹಲಿ: ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಟಾರ್ಗೆಟ್ ಪಟ್ಟಿಯಲ್ಲಿದ್ದ ಕೆಲವೊಂದು ಮೊಬೈಲ್ ಡಿವೈಸ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ಅಸ್ತಿತ್ವವಿರುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ಸ್ಪಷ್ಟವಾಗಿದೆ ಎಂದು ದಿ ವೈರ್ ವರದಿ ಪ್ರಕಟಿಸಿದೆ. ಹಿಂದೂಸ್ಥಾನ್ ಟೈಮ್ಸ್, ದಿ ಹಿಂದು, ವೈರ್, ಇಂಡಿಯನ್ ಎಕ್ಸ್ ಪ್ರೆಸ್, ನ್ಯೂಸ್ 18, ಇಂಡಿಯಾ ಟುಡೆ, ಪಯೋನೀರ್, ಬರಹಗಾರರು, ಅಂಕಣಕಾರರು, ಪ್ರಾದೇಶಿಕ ಮಾಧ್ಯಮಗಳವರೂ ಟಾರ್ಗೆಟ್ ಲಿಸ್ಟ್ ನಲ್ಲಿದ್ದದ್ದು ಬೆಳಕಿಗೆ ಬಂದಿದೆ.
ಡೇಟಾದಲ್ಲಿರುವ ಫೋನ್ ನಂಬರ್ ಗಳೂ ಇರುವ ಒಂದೇ ಕಾರಣದಿಂದ ಇದು ಡಿವೈಸ್ ಗಳಲ್ಲಿ ಪೆಗಾಸಸ್ ನ ಸ್ಪೈವೇರ್ ಇತ್ತೇ ಅಥವಾ ಕೇವಲ ಹ್ಯಾಕ್ ಯತ್ನಕ್ಕೆ ಪ್ರಯತ್ನಿಸಲಾಗಿತ್ತೇ ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ.
ಪತ್ರಕರ್ತರ ಮೇಲಿನ ಕಣ್ಗಾವಲಿನ ಸಾಧ್ಯತೆಗಳು ಹಾಗೂ ಸಂಭಾವ್ಯ ಟಾರ್ಗೆಟ್ ಗಳನ್ನು ಪೆಗಾಸಸ್ ಯೋಜನೆ ಸೂಚಿಸುತ್ತಿದೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಒಕ್ಕೂಟ ವಿಶ್ಲೇಷಿಸಿದೆ.
ದಿ ವೈರ್ ನ ಇಬ್ಬರು ಸಂಸ್ಥಾಪಕ ಸಂಪಾದಕರು, ರಾಜತಾಂತ್ರಿಕ ಸಂಪಾದಕರು ಹಾಗೂ ರೋಹಿಣಿ ಸಿಂಗ್ ಸೇರಿದಂತೆ ಸಂಸ್ಥೆಗೆ ನಿರಂತರವಾಗಿ ಬರೆಯುತ್ತಿದ್ದ ಇಬ್ಬರು ಲೇಖಕರ ಹೆಸರು ಪೆಗಾಸಸ್ ಹ್ಯಾಕ್ ಪಟ್ಟಿಯಲ್ಲಿದೆ.
ರೋಹಿಣಿ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಅವರ ಉದ್ಯಮ ವ್ಯವಹಾರ, ಪ್ರಧಾನಿ ಮೋದಿ ಅವರಿಗೆ ನಿಕಟವಾಗಿರುವ ಉದ್ಯಮಿ ನಿಖಿಲ್ ಮರ್ಚೆಂಟ್ ಅವರ ಕುರಿತು ಹಾಗೂ ಕೇಂದ್ರ ಸಚಿವ ಪೀಯೂಷ್ ಗೋಯಲ್ ಉದ್ಯಮಿ ಅಜಯ್ ಪಿರಮಾಲ್ ಅವರೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೇಖನ ಬರೆದ ನಂತರ ಆಕೆಯ ಫೋನ್ ನಂಬರ್ ಪೆಗಾಸಸ್ ಗೆ ಸಂಬಂಧಿಸಿದ ಪಟ್ಟಿಯಲ್ಲಿತ್ತು ಎಂದು ದಿ ವೈರ್ ಹೇಳಿದೆ.
ಇನ್ನು ರಾಫೆಲ್ ಒಪ್ಪಂದದ ಕುರಿತ ಲೇಖನಗಳಿಗೆ ಕೆಲಸ ಮಾಡುತ್ತಿದ್ದ ಇಂಡಿಯನ್ ಎಕ್ಸ್ ಪ್ರೆಸ್ ನ ಪತ್ರಕರ್ತ ಸುಶಾಂತ್ ಸಿಂಗ್ ಅವರ ಹೆಸರೂ ಸಹ 2018 ರ ಮಧ್ಯಭಾಗದಲ್ಲಿ ಪಟ್ಟಿಯಲ್ಲಿತ್ತು. ಸಿಂಗ್ ಅವರ ಈಗಿನ ಫೋನ್ ಪೆಹಾಸಸ್ ಸ್ಪೈವೇರ್ ಗೆ ಒಳಪಟ್ಟಿದೆ ಎಂಬ ಮಾಹಿತಿ ಡಿಜಿಟಲ್ ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ದೃಢಪಟ್ಟಿದೆ.
ದಿ ವೈರ್ ಪ್ರಕಟಿಸಿರುವ ವರದಿಯ ಪ್ರಕಾರ ಪತ್ರಕರ್ತರಷ್ಟೇ ಅಲ್ಲದೇ ರಾಜಕೀಯ ನಾಯಕರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ವಿಜ್ಞಾನಿಗಳ ಮೊಬೈಲ್ ಗಳೂ ಹ್ಯಾಕ್ ಆಗಿವೆ.