ನವದೆಹಲಿ: ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ಅಡಿಯಲ್ಲಿ ಹಂಚಿಕೆಯಾದ ಹಣದ ಜೊತೆಗೆ, ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೇಂದ್ರವು ಸುಮಾರು 40,000 ಕೋಟಿ ರೂ. ಹಣದ ಯೋಜನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.
ಬಿಜೆಪಿ ಸದಸ್ಯರಾದ ದಿಲೀಪ್ ಸೈಕಿಯಾ ಮತ್ತು ರಮೇಶ್ ಚಂದರ್ ಕೌಶಿಕ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಕೋವಿಡ್-19 ಸಾರ್ವಜನಿಕ ಆರೋಗ್ಯ ಸವಾಲಿನ ನಿರ್ವಹಣೆ ಸೇರಿದಂತೆ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ಅಗತ್ಯವಾದ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ಸಹಾಯವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ನೀಡಲಾಗುತ್ತದೆ. 2019-20ರ ಅವಧಿಯಲ್ಲಿ, 1113.21 ಕೋಟಿ ರೂ.ಗಳ ಹಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್-19 ನಿರ್ವಹಣೆಗೆ ಬಿಡುಗಡೆ ಮಾಡಲಾಗಿದ್ದು, ಇದು ಎನ್‌ಎಚ್‌ಎಂ ಅಡಿಯಲ್ಲಿ ರಾಜ್ಯಗಳ ಸಾಮಾನ್ಯ ಸಂಪನ್ಮೂಲ ಪ್ರಮಾಣಕ್ಕಿಂತ ಹೆಚ್ಚಿನದಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ, ಕೇಂದ್ರ ಸರ್ಕಾರವು 'ಇಂಡಿಯಾ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್'ಗೆ ಅನುಮೋದನೆ ನೀಡಿದ್ದು, ಕೋವಿಡ್-19 ನಿಂದ ಉಂಟಾಗುವ ಬೆದರಿಕೆಯನ್ನು ತಡೆಗಟ್ಟಲು, ಸೋಂಕು ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸುವ ಉದ್ದೇಶದಿಂದ 2020 ರ ಏಪ್ರಿಲ್‌ನಲ್ಲಿ ಈ ಯೋಜನೆ ಅಡಿಯಲ್ಲಿ 15,000 ಕೋಟಿ ರೂಗಳನ್ನು ಬಿಡುಗಡೆ ಮಾಡಿತ್ತು ಎಂದು ಮಾಹಿತಿ ನೀಡಿದರು.
ಈ ಪ್ಯಾಕೇಜ್ ಅಡಿಯಲ್ಲಿ, 2020-21ರ ಅವಧಿಯಲ್ಲಿ, ಕೋವಿಡ್-19 ನ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ನೆರವಾಗಲು 8,257.88 ಕೋಟಿ ರೂ.ಗಳ ಹಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು. 'ಇಂಡಿಯಾ ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್: ಹಂತ -2' ಅನ್ನು ಸರ್ಕಾರವು 23,123 ಕೋಟಿ ರೂ.ಗಳೊಂಗದಿಗೆ ಅನುಮೋದಿಸಿದೆ. ಇದರಲ್ಲಿ ಜುಲೈ 2021 ರಿಂದ ಮಾರ್ಚ್ 2022 ರವರೆಗೆ ಕೇಂದ್ರ ಸರ್ಕಾರದ ಪಾಲು 15,000 ಕೋಟಿ ಮತ್ತು ರಾಜ್ಯ ಸರ್ಕಾರ 8,123 ಕೋಟಿ ರೂ. ಪಾಲು ಹೊಂದಿದೆ ಎಂದು ಮಾಹಿತಿ ನೀಡಿದರು.
ಸಮುದಾಯಕ್ಕೆ ಹತ್ತಿರವಿರುವ ಗ್ರಾಮೀಣ, ಬುಡಕಟ್ಟು ಮತ್ತು ಪೆರಿ-ನಗರ ಪ್ರದೇಶಗಳನ್ನು ಒಳಗೊಂಡಂತೆ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರದ ಈ ಯೋಜನೆ ಬೆಂಬಲವನ್ನು ನೀಡಲಿದೆ, ಕೋವಿಡ್ ಸಾಂಕ್ರಾಮಿಕ ನಿರ್ವಹಣೆಗಾಗಿ ಮಕ್ಕಳ ಆರೈಕೆ ಸೇರಿದಂತೆ ಕೋವಿಡ್-19 ಪ್ರಕರಣಗಳು ಜಿಲ್ಲಾ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ಸೇವಾ ವಿತರಣೆಯನ್ನು ಹೆಚ್ಚಿಸಲು ಔಷಧಗಳು ಮತ್ತು ರೋಗನಿರ್ಣಯ ಪರಿಕರಗಳನ್ನು ಖರೀದಿಸಲು ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.
ಔಷಧಿಗಳ ಬಫರ್ ಅನ್ನು ನಿರ್ವಹಿಸಲು, ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಅನುಷ್ಠಾನ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಟೆಲಿ-ಸಮಾಲೋಚನೆಗಳನ್ನು ವಿಸ್ತರಿಸುವಂತಹ ಮಾಹಿತಿ ಮತ್ತು ತಂತ್ರಜ್ಞಾನ ಮಧ್ಯಸ್ಥಿಕೆಗಳು ಮತ್ತು ಕೋವಿಡ್ ನಿರ್ವಹಣೆಯ ಎಲ್ಲಾ ಅಂಶಗಳಿಗೆ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಗೆ ಇದು ಬೆಂಬಲವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.