ನವದೆಹಲಿ: ದೇಶದಲ್ಲಿ ನೀಡಲಾಗಿರುವ ಒಟ್ಟು ಕೋವಿಡ್-19 ಲಸಿಕೆ ಪ್ರಮಾಣವು 45 ಕೋಟಿ ದಾಟಿದೆ. 18 ರಿಂದ 44 ವರ್ಷದೊಳಗಿನವರು 15.38 ಕೋಟಿಗೂ ಹೆಚ್ಚಿನ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಬುಧವಾರ ಒಂದೇ ದಿನ ಸುಮಾರು 40 ಲಕ್ಷ (39,42,457 ) ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಾತ್ಕಾಲಿಕ ವರದಿಯೊಂದರಲ್ಲಿ ಹೇಳಿದೆ.
ಬುಧವಾರ 18 ರಿಂದ 44 ವರ್ಷದೊಳಗಿನ 20,54,874 ಮಂದಿಗೆ ಮೊದಲ ಡೋಸ್ ಹಾಗೂ 3,00,099 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆಯಾಗಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 18-44 ವರ್ಷ ವಯಸ್ಸಿನ 14,66,22,393 ಜನರು ಮೊದಲ ಡೋಸ್ ಪಡೆದಿದ್ದಾರೆ. ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾದಾಗಿನಿಂದಲೂ ಒಟ್ಟಾರೇ 71,92,485 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ 18ರಿಂದ 44 ವರ್ಷದೊಳಗಿನ ಸುಮಾರು 1 ಕೋಟಿಗೂ ಹೆಚ್ಚು ಜನರು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಅಭಿಯಾನದ 194ನೇ ದಿನವಾದ ಬುಧವಾರ ಒಟ್ಟಾರೇ, 39,42,457 ಡೋಸ್ ಲಸಿಕೆ ನೀಡಲಾಗಿದೆ. ಬುಧವಾರ ಸಂಜೆಯವರೆಗೂ 27,41,794 ಫಲಾನುಭವಿಗಳು ಮೊದಲ ಡೋಸ್ ಪಡೆದಿದ್ದರೆ, 12,00,663 ಫಲಾನುಭವಿಗಳು ಎರಡನೇ ಡೋಸ್ ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್-19 ಸಾಂಕ್ರಾಮಿಕದಿಂದ ದೇಶದ ಅತ್ಯಂತ ದುರ್ಬಲ ಜನಸಂಖ್ಯೆಯ ಗುಂಪುಗಳನ್ನು ರಕ್ಷಿಸುವ ಸಾಧನವಾಗಿ ಲಸಿಕೆ ಅಭಿಯಾನವನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.