ನವದೆಹಲಿ: ಅದು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲ. ಟಾಟಾ ಗ್ರೂಪ್ಸ್ನ ಚೇರ್ಮೆನ್ ಆಗಿದ್ದ ಜೆ.ಆರ್.ಡಿ ಟಾಟಾ ಪ್ರಧಾನಿಗೆಂದು ಒಂದು ಗಿಫ್ಟ್ ಕಳುಹಿಸಿಕೊಟ್ಟಿದ್ದರು. ಆ ಗಿಫ್ಟ್ನಿಂದಾಗಿ ಖುಷಿಯಾದ ಇಂದಿರಾ ಗಾಂಧಿಯವರು ಟಾಟಾ ಅವರಿಗೆ ಪತ್ರವೊಂದನ್ನು ಬರೆದು ಕಳುಹಿಸಿದ್ದರು. ಆ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಟಾ ಅವರು ಇಂದಿರಾ ಗಾಂಧಿ ಅವರಿಗೆ ಪರ್ಫ್ಯೂಮ್ ಕಳುಹಿಸಿಕೊಟ್ಟಿದ್ದರು. ಅದನ್ನು ಬಳಸಿ ಖುಷಿಯಾದ ಆಗಿನ ಪ್ರಧಾನಿಯವರು, 'ನಾನು ನೀವು ಕಳಿಸಿರುವ ಸುಗಂಧ ದ್ರವ್ಯಗಳಿಂದ ರೋಮಾಂಚನಗೊಂಡಿದ್ದೇನೆ. ತುಂಬಾ ಧನ್ಯವಾದಗಳು. ನಾನು ಸಾಮಾನ್ಯವಾಗಿ ಸುಗಂಧ ದ್ರವ್ಯವನ್ನು ಬಳಸುವುದಿಲ್ಲ ಮತ್ತು ಅಂತಹ ಪ್ರಪಂಚದಿಂದ ದೂರವಿರುತ್ತೇನೆ. ಅವುಗಳ ಬಗ್ಗೆ ಸಹ ನನಗೆ ತಿಳಿದಿಲ್ಲ. ಆದರೆ ಇಂದಿನಿಂದ, ನಾನು ಖಂಡಿತವಾಗಿಯೂ ಇದನ್ನು ಪ್ರಯೋಗ ಮಾಡುತ್ತೇನೆ' ಎಂದು ಪತ್ರದ ಆರಂಭದಲ್ಲಿ ಇಂದಿರಾ ಅವರು ಹೇಳಿದ್ದಾರೆ.
ನಿಮ್ಮನ್ನು ಭೇಟಿ ಮಾಡಿ ಒಳ್ಳೆಯದಾಯಿತು. ನೀವು ಅನುಕೂಲಕರ ಅಥವಾ ವಿಮರ್ಶಾತ್ಮಕವಾಗಿ ಯಾವುದೇ ಅಭಿಪ್ರಾಯಗಳನ್ನು ತಿಳಿಸಲು ಬಯಸಿದಾಗ ದಯವಿಟ್ಟು ಬಂದು ನನ್ನನ್ನು ಭೇಟಿಯಾಗಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಪತ್ರದ ಪ್ರತಿಯನ್ನು ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಟ್ವೀಟ್ಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.