ನವದೆಹಲಿ: ಡೆಲ್ಟಾ ವೈರಸ್ ರೂಪಾಂತರ ಹರಡುವಿಕೆ ಮತ್ತು ಲಸಿಕಾ ಅಭಿಯಾನದ ಮಂದಗತಿಯಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೊನಾ ವೈರಸ್ ಸಾಂಕ್ರಮಿಕ ಇನ್ನು ಕಡಿಮೆಯಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬ್ಲೂಂಬರ್ಗ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಒಟ್ಟು ಆರು ಡಬ್ಲ್ಯುಎಚ್‌ಒ ಪ್ರದೇಶಗಳ ಐದರಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಆಫ್ರಿಕಾದಲ್ಲಿ ಕಳೆದ ಎರಡು ವಾರಗಳಲ್ಲಿ ಶೇ. 30 ರಿಂದ 40 ರಷ್ಟು ಮರಣ ಪ್ರಮಾಣ ಜಿಗಿತ ಕಂಡಿದೆ ಎಂದು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಜಗತ್ತಿನಾದ್ಯಂತ 5 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. 9,300 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಇನ್ನು ಕಡಿಮೆಯಾಗಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಹೇಳಿದರು.
ನಿರಂತರ ಕರೊನಾ ಹರಡುವಿಕೆಗೆ ನಾಲ್ಕು ಕಾರಣಗಳನ್ನು ಪಟ್ಟಿ ಮಾಡಿದ ಸ್ವಾಮಿನಾಥನ್, ಡೆಲ್ಟಾ ರೂಪಾಂತರಿ, ಸಾಮಾಜಿಕ ಪಾಲ್ಗೊಳ್ಳುವಿಕೆ, ಲಾಕ್ಡೌನ್ ಸಡಿಲಿಕೆ ಮತ್ತು ಲಸಿಕಾ ಅಭಿಯಾನದ ಮಂದಗತಿಯೇ ಕಾರಣ ಎಂದರು.
ವೇಗವಾಗಿ ಹರಡುವ ಡೆಲ್ಟಾ ರೂಪಾಂತರವು ಕೋವಿಡ್ -19ರ ಅತ್ಯಂತ ಅಪಾಯಕಾರಿ ರೂಪಾಂತರವಾಗಿದೆ ಮತ್ತು ಇದು ಸೋಂಕುಗಳ ಉಲ್ಬಣಕ್ಕೆ ಮುಖ್ಯ ಕಾರಣವಾಗಿದೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಮೂಲ ವೈರಸ್‌ನಿಂದ ಸೋಂಕಿತ ವ್ಯಕ್ತಿಯು ಮೂರು ಜನರಿಗೆ ಸೋಂಕು ತಗುಲಿದರೆ, ಡೆಲ್ಟಾ ರೂಪಾಂತರದಿಂದ ಸೋಂಕಿತ ವ್ಯಕ್ತಿಯು 8 ಜನರಿಗೆ ಸೋಂಕು ತಗುಲಿಸಬಹುದು ಎಂದು ಹೇಳಿದರು.
ಜನರು ಮನೆಗಳಿಂದ ಹೊರಹೋಗುತ್ತಿದ್ದು, ಸಾಮಾಜಿಕವಾಗಿ ಪಾಲ್ಗೊಳ್ಳುತ್ತಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು. ಇದಲ್ಲದೆ, ವಿಶ್ವದ ಅನೇಕ ದೇಶಗಳು ಮತ್ತು ಆ ದೇಶಗಳಲ್ಲಿನ ಪ್ರದೇಶಗಳು ನಿರ್ಬಂಧಗಳನ್ನು ಸಡಿಲಗೊಳಿಸಿವೆ. ಸಾಮಾಜಿಕ ಅಂತರದಂತಹ ಸುರಕ್ಷತಾ ಕ್ರಮಗಳಿಗೆ ವಿಶ್ರಾಂತಿ ಘೋಷಿಸುವುದರಿಂದ ಅಪಾಯ ತೆರೆದುಕೊಂಡಿದೆ ಎಂದು ಹೇಳಿದರು.
ಮತ್ತೊಂದು ಸಂದರ್ಶನದಲ್ಲಿ, ಸ್ವಾಮಿನಾಥನ್, ಕೊವಾಕ್ಸಿನ್‌ನ 3ನೇ ಹಂತದ ದತ್ತಾಂಶವು ಭರವಸೆಯಂತೆ ಕಾಣುತ್ತದೆ ಮತ್ತು ಈ ಲಸಿಕೆಯನ್ನು ಡಬ್ಲ್ಯುಎಚ್‌ಒ ಆಗಸ್ಟ್ ಅಂತ್ಯದವರೆಗೆ ಅನುಮೋದಿಸಬಹುದು ಎಂದು ಹೇಳಿದ್ದಾರೆ.