ಪ್ಯಾರಿಸ್: ಫ್ರಾನ್ಸ್‌ಗೆ ಕೋವಿಡ್ ನಾಲ್ಕನೇ ಅಲೆ ಅಪ್ಪಳಿಸಿದೆ. ಈ ನಡುವೇ ಫ್ರಾನ್ಸ್‌ನಲ್ಲಿ ವಿವಾದಾತ್ಮಕ ಲಸಿಕೆ ಪಾಸ್ಪೋರ್ಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಫ್ರೆಂಚ್ ಚಿತ್ರಮಂದಿರಗಳು, ವಸ್ತುಸಂಗ್ರಹಾಲಯಗಳು ಮತ್ತು ಕ್ರೀಡಾ ಸ್ಥಳಗಳು ಬುಧವಾರ ಸಂದರ್ಶಕರ ಬಳಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ ಕೋವಿಡ್ ನೆಗೆಟಿವ್ ವರದಿಯನ್ನು ಕೇಳಲು ಆರಂಭಿಸಿದೆ.
ಆಗಸ್ಟ್‌ನಿಂದ 50 ಕ್ಕೂ ಹೆಚ್ಚು ಜನರು ಸೇರುವ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಖರೀದಿ ಕೇಂದ್ರಗಳಿಗೆ
"ಹೆಲ್ತ್ ಪಾಸ್" ಎಂದು ಕರೆಯಲ್ಪಡುವ ಪಾಸ್ ಒಂದು ಅಗತ್ಯವಾಗಿದೆ. ಪ್ರಧಾನ ಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಈ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಹೊಸ ಸೋಂಕುಗಳು ರೋಗ ನಿರೋಧಕ ಶಕ್ತಿ ಹೊಂದಿರದ ಜನರಲ್ಲಿವೆ ಎಂದು ತಿಳಿಸಿದ್ದಾರೆ.
ಬುಧವಾರ ಫ್ರಾನ್ಸ್‌ನಲ್ಲಿ 21,000 ದಷ್ಟು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದು ಮೇ ಆರಂಭದ ನಂತರ ದಾಖಲಾದ ಅತೀ ಗರಿಷ್ಢದ ಪ್ರಕರಣಗಳಾಗಿದೆ. ಈ ಬೆನ್ನಲ್ಲೇ "ನಾವು ನಾಲ್ಕನೇ ತರಂಗದಲ್ಲಿದ್ದೇವೆ" ಎಂದು ಕ್ಯಾಸ್ಟೆಕ್ಸ್ ಟಿಎಫ್ 1 ಟೆಲಿವಿಷನ್‌ಗೆ ತಿಳಿಸಿದ್ದಾರೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಪಾಸ್ ಅನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ತಮ್ಮ ಆಯ್ಕೆಯ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ನಿರಾಕರಿಸುವ ಜನರ ವಿರುದ್ದ ಆರೋಗ್ಯ ಮಂತ್ರಿ ಆಲಿವಿಯರ್ ವೆರನ್ ವಾಗ್ದಾಳಿ ನಡೆಸಿದ್ದಾರೆ. "ಸ್ವಾತಂತ್ರ್ಯವು ತೆರಿಗೆಗಳನ್ನು ಕಟ್ಟದಿರುವುದು, ಮೋಟಾರು ಸೈಕಲ್ ತಪ್ಪಾದ ದಾರಿಯಲ್ಲಿ ಓಡಿಸುವುದು, ರೆಸ್ಟೋರೆಂಟ್‌ನಲ್ಲಿ ಧೂಮಪಾನ ಮಾಡುವುದು ಅಥವಾ ಇತರರನ್ನು ರಕ್ಷಿಸುವಷ್ಟು ನನ್ನನ್ನು ರಕ್ಷಿಸುವ ಲಸಿಕೆಯನ್ನು ನಿರಾಕರಿಸುವುದು ಅಲ್ಲ," ಎಂದು ಸಂಸತ್ತಿನಲ್ಲಿ ಹೇಳಿದರು.
4 ನೇ ಅಲೆ ನಡುವೆ ಕೋವಿಡ್ ತಡೆಯಲು ಫ್ರಾನ್ಸ್‌ನ ಹೊಸ ಕ್ರಮಗಳೇನು?
ಡೆಲ್ಟಾ ರೂಪಾಂತರದ ಆತಂಕದ ವೇಗದ ಮಧ್ಯೆ ಫ್ರಾನ್ಸ್‌ನಲ್ಲಿ ನಾಲ್ಕನೇ ಕೋವಿಡ್ ಸಾಂಕ್ರಾಮಿಕ ಅಲೆಯು ಕಾಣಿಸಿಕೊಂಡಿದೆ. ಈ ಹಿಂದೆಯೇ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಈ ನಡುವೆ ನಾಲ್ಕನೇ ಕೋವಿಡ್ ಅಲೆಯ ಬೆನ್ನಲ್ಲೇ ಫ್ರೆಂಚ್ ಸರ್ಕಾರದ ನಿರ್ಬಂಧಿತ ಕ್ರಮಗಳು ಬುಧವಾರದಿಂದ ಜಾರಿಗೆ ಬಂದಿದೆ. ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲು ಅಥವಾ ಫ್ರಾನ್ಸ್‌ನ ಮನೋರಂಜನಾ ಉದ್ಯಾನವನಗಳು, ಈಜುಕೊಳಗಳು ಮತ್ತು ಜಿಮ್‌ಗಳಿಗೆ ಹೋಗಲು ಬಯಸುವ ಜನರು ಈಗ ಕೋವಿಡ್ -19 ವಿರುದ್ಧ ಲಸಿಕೆ ಪಡೆಯುವುದು, ನೆಗೆಟಿವ್ ಕೋವಿಡ್ ವರದಿ ಹೊಂದಿರುವುದು ಅಥವಾ ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಸಾಬೀತುಪಡಿಸುವ ಪ್ರಮಾಣಪತ್ರವನ್ನು ನೀಡಬೇಕಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ. ಲಸಿಕೆ ಹಾಕಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಗಸ್ಟ್ ಆರಂಭದಿಂದ, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿಗೆ ಪ್ರವೇಶಿಸಲು ಹಾಗೂ ದೂರದ-ರೈಲು ಮತ್ತು ವಿಮಾನ ಪ್ರಯಾಣಗಳಿಗೆ ಆರೋಗ್ಯ ಪಾಸ್ ಅಗತ್ಯವಿರುತ್ತದೆ. ಆದರೆ ಸೆಪ್ಟೆಂಬರ್‌ನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಈ ಸಂದರ್ಭ ಶಾಲೆಗಳಿಗೆ ಯಾವುದೇ ದಾಖಲೆ, ಪ್ರಮಾಣ ಪತ್ರಗಳನ್ನು ನೀಡಬೇಕಾಗಿಲ್ಲ.
ಏನಿದು ಹೆಲ್ತ್ ಪಾಸ್
"ಈ ಹೆಲ್ತ್ ಪಾಸ್ ನಿಯಮವನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಸಾಂಕ್ರಾಮಿಕ ರೋಗವು ಮತ್ತಷ್ಟು ಹೆಚ್ಚಾದರೂ ಸಾಧ್ಯವಾದಷ್ಟು ಸ್ಥಳಗಳನ್ನು ತೆರೆದಿಡಲು ಅವಕಾಶ ನೀಡುವ ಉದ್ದೇಶದಿಂದ ಈ ಹೆಲ್ತ್ ಪಾಸ್ ಜಾರಿಗೆ ತರಲಾಗಿದೆ," ಎಂದು ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಬುಧವಾರ ಹೇಳಿದ್ದಾರೆ. "ನಾವು ನಾಲ್ಕನೇ ತರಂಗದಲ್ಲಿದ್ದೇವೆ. ಡೆಲ್ಟಾ ರೂಪಾಂತರವು ಹೆಚ್ಚಾಗಿ ಇದೆ. ಇದು ಹೆಚ್ಚು ಸಾಂಕ್ರಾಮಿಕವಾಗಿದೆ," ಎಂದು ಪ್ರಧಾನಿ ಹೇಳಿದ್ದಾರೆ.
ಲಸಿಕೆ ಪಡೆಯಲಾಗಿದೆ ಎಂಬ ಪ್ರಮಾಣ ಪತ್ರ ಹೊಂದಿರುವುದು ಅಥವಾ ನೆಗೆಟಿವ್ ಕೋವಿಡ್ ವರದಿ ಹೊಂದಿರುವುದು ಈ ಹೆಲ್ತ್ ಕಾರ್ಡ್ ಆಗಿದೆ. ಬುಧವಾರ ಪರಿಚಯಿಸಲಾದ ಬದಲಾವಣೆಗಳನ್ನು ಸುಗ್ರೀವಾಜ್ಞೆಯಿಂದ ಜಾರಿಗೆ ತರಲಾಗಿದೆ. ಸೆಪ್ಟೆಂಬರ್‌ನಿಂದ, ಆರೋಗ್ಯ ಮತ್ತು ನಿವೃತ್ತಿ ಗೃಹ ಕಾರ್ಮಿಕರಿಗೆ ಲಸಿಕೆಯು ಕಡ್ಡಾಯವಾಗಲಿದೆ. ಆದರೆ ಈ ಜನರಲ್ಲಿ ಲಸಿಕೆಯ ಬಗ್ಗೆ ಹೆಚ್ಚಿನ ಆತಂಕವಿದೆ ಎನ್ನಲಾಗಿದೆ. ಈ ಹಿನ್ನೆಲೆ ಲಸಿಕೆ ಕಡ್ಡಾಯಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಎಡಪಂಥೀಯ ಪಕ್ಷಗಳು ವಿಶೇಷವಾಗಿ ಆರೋಗ್ಯ ಪಾಸ್ ಅನ್ನು ವೈಯಕ್ತಿಕ ಸ್ವಾತಂತ್ರ್ಯಗಳ ಉಲ್ಲಂಘನೆ ಎಂದು ದೂಷಿಸಿವೆ. ಲಸಿಕೆ ಪಡೆಯಲು ಜನರನ್ನು ಒತ್ತಾಯಿಸುವುದರ ಬದಲಾಗಿ ಜನರ ಮನವೊಲಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಎಡಪಕ್ಷಗಳು ಹೇಳಿದೆ. ಹಾಗೆಯೇ ಕೊರೊನ ಹಾಟ್‌ಸ್ಪಾಟ್‌ಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ.
ಕೋವಿಡ್ ಲಸಿಕೆಗಾಗಿ ಗುರಿ ನಿಗದಿ
ಲೌವ್ರೆ ಮ್ಯೂಸಿಯಂ ಮತ್ತು ಐಫೆಲ್ ಟವರ್ ಬುಧವಾರ ಲಸಿಕೆ ತಪಾಸಣೆ ಕಾರ್ಯಗತಗೊಳಿಸಲು ಪ್ರಾರಂಭಿಸಿದ ತಾಣಗಳಲ್ಲಿ ಸೇರಿವೆ. ಆದರೆ ಹೆಚ್ಚಿನ ಪ್ರವಾಸಿಗರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಕೈಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ದೇಶಕ್ಕೆ ಆಗಮಿಸಿದಾಗ ಲಸಿಕೆ ಪಡೆದ ಪ್ರಮಾಣಪತ್ರ ತೋರಿಸುವುದು ಕಡ್ಡಾಯವಾದ ಕಾರಣ ಈ ಪ್ರಮಾಣಪತ್ರ ಜನರು ಬಳಿಯಲ್ಲಿಯೇ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಪ್ಯಾರಿಸ್ ಉಪನಗರ ರೋಸ್ನಿ-ಸೌಸ್-ಬೋಯಿಸ್‌ನಲ್ಲಿ, 28 ವರ್ಷದ ಮೇರಿ-ಏಂಜೆ ರೊಡ್ರಿಗಸ್ ತನ್ನ ಎರಡನೇ ಲಸಿಕೆ ಶಾಟ್ ಪಡೆದ ನಂತರವೂ ಸಿನೆಮಾ ಪ್ರದರ್ಶನದಿಂದ ನಿರ್ಬಂಧಿಸಲ್ಪಟ್ಟಿದ್ದಕ್ಕೆ ಆಶ್ಚರ್ಯಪಟ್ಟಿದ್ದಾರೆ. ಎರಡನೇ ಡೋಸ್ ಪಡೆದು ಒಂದು ವಾರವಾದರೂ ಆಗಿರಬೇಕು ಎಂಬ ನಿಯಮದ ಬಗ್ಗೆ ಮೇರಿ-ಏಂಜೆ ರೊಡ್ರಿಗಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಫ್ರೆಂಚ್ ಜನಸಂಖ್ಯೆಯ 56 ಪ್ರತಿಶತದಷ್ಟು ಜನರನ್ನು ಪ್ರತಿನಿಧಿಸುವ ಸುಮಾರು 38 ಮಿಲಿಯನ್ ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಸುಮಾರು 46 ಪ್ರತಿಶತದಷ್ಟು, ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಬೇಸಿಗೆಯ ಅಂತ್ಯದ ವೇಳೆಗೆ 50 ಮಿಲಿಯನ್ ಜನರಿಗೆ ಕನಿಷ್ಠ ಒಂದು ಶಾಟ್ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಕೋವಿಡ್ ನಿಯಮ ಉಲ್ಲಂಘಿಸಿದರೆ ದಂಡವೆಷ್ಟು?
ಆರೋಗ್ಯ ಪಾಸ್ ನಿಯಮಗಳನ್ನು ಗೌರವಿಸಲು ನಿರಾಕರಿಸುವ ಯಾವುದೇ ಅಪರಾಧಿಗೆ 1,500 ಯುರೋಗಳಷ್ಟು ($ 1,767) ದಂಡ ವಿಧಿಸಲಾಗುವುದು. ಕಾನೂನು ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಯು ಮೊದಲ ಉಲ್ಲಂಘನೆಯಲ್ಲಿ 7,500 ಯುರೋಗಳನ್ನು ಪಾವತಿಸಬೇಕಾಗುತ್ತದೆ. ಮೂರನೆಯ ಬಾರಿ ಉಲ್ಲಂಘನೆ ಮಾಡಿದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೇ 9,000 ಯುರೋ ದಂಡ ಪಾವತಿ ಮಾಡಬೇಕಾಗುತ್ತದೆ. ಕಾನೂನು ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಯಾದರೆ ಒಂದು ವರ್ಷ ಜೈಲು ಮತ್ತು 45,000 ಯುರೋಗಳಷ್ಟು ದಂಡವನ್ನು ವಿಧಿಸಬಹುದಾಗಿದೆ.
ಮಂಗಳವಾರ, ಫ್ರಾನ್ಸ್ 18,000 ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 98 ಪ್ರತಿಶತದಷ್ಟು ಮಂದಿ ಇನ್ನೂ ಲಸಿಕೆ ಪಡೆಯದವರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಲಸಿಕೆ ಪಡೆಯುವ ಬಗ್ಗೆ ಹೆಚ್ಚು ಆದ್ಯತೆಯನ್ನು ನೀಡಿ, ಕಾನೂನುಗಳನ್ನು ಕಠಿಣಗೊಳಿಸಿದೆ. ಆದರೆ ಈ ಲಸಿಕೆಯ ಬಗ್ಗೆ ಅನುಮಾನ ಹೊಂದಿರುವ ಅನೇಕ ಮಂದಿ, ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿ "ಸರ್ವಾಧಿಕಾರ"ವನ್ನು ಪ್ರದರ್ಶಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ನಿರ್ಬಂಧಗಳು ಮ್ಯಾಕ್ರನ್ಸ್ ರಿಪಬ್ಲಿಕ್ ಆನ್ ಮೂವ್ (ಎಲ್‌ಆರ್‌ಇಎಮ್) ಪಕ್ಷದ ಕೆಲವು ಶಾಸಕರ ಟೀಕೆಗೆ ಗುರಿಯಾಗಿದೆ. "ಆರೋಗ್ಯ ಪಾಸ್ ನಮ್ಮ ದೇಶವನ್ನು ಮುರಿಯಲಿದೆ" ಎಂದು ಶಾಸಕರು ದೂರಿದ್ದಾರೆ.