ನವದೆಹಲಿ: ದೇಶದ ಖ್ಯಾತ ಹವಾಮಾನ ತಜ್ಞರೊಬ್ಬರು ಇತ್ತೀಚಿಗೆ ಪ್ರಕಟಿಸಿರುವ ಸಂಶೋಧನಾ ಪತ್ರಿಕೆಯೊಂದರ ಪ್ರಕಾರ, ದೇಶದಲ್ಲಿ ಕಳೆದ 50 ವರ್ಷಗಳಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಬಿಸಿಗಾಳಿಯಿಂದ ಸಾವನ್ನಪ್ಪಿದ್ದಾರೆ. 1971-2019ರವರೆಗೂ 70 ಬಿಸಿಗಾಳಿ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ.
ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ ರಾಜೀವನ್ ಮತ್ತು ವಿಜ್ಞಾನಿಗಳಾದ ಕಮಲ್ಜಿತ್ ರೇ, ಎಸ್ ಎಸ್ ರೇ, ಆರ್ ಕೆ ಗಿರಿ ಮತ್ತು ಎಪಿ ದಿಮ್ರಿ ಈ ವರ್ಷದ ಆರಂಭದಲ್ಲಿ ಪ್ರಕಟಿಸಿದ ಸಂಶೋಧನಾ ಪತ್ರಿಕೆಯಲ್ಲಿ ಈ ಅಂಶ ತಿಳಿದುಬಂದಿದೆ.
ಬಿಸಿಗಾಳಿ ಹವಾಮಾನ ವೈಫರೀತ್ಯದ ಘಟನೆಗಳಲ್ಲಿ ಒಂದಾಗಿದೆ. ಕಳೆದ 50 ವರ್ಷಗಳಲ್ಲಿ (1971-2019) ಹವಾಮಾನ ವೈಫರೀತ್ಯ ಘಟನೆಗಳಿಂದ 1,41,308 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 17,362 ಜನರು ಬಿಸಿಗಾಳಿಯಿಂದ ಸಾವನ್ನಪ್ಪಿದ್ದಾರೆ. ದಾಖಲಾದ ಒಟ್ಟು ಸಾವುಗಳಲ್ಲಿ ಶೇಕಡಾ 12 ಕ್ಕಿಂತಲೂ ಹೆಚ್ಚಾಗಿರುವುದಾಗಿ ಅಧ್ಯಯನ ಹೇಳಿದೆ.
ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಓಡಿಶಾದಲ್ಲಿ ಗರಿಷ್ಠ ಬಿಸಿಗಾಳಿ ಸಾವು ಪ್ರಕರಣಗಳು ವರದಿಯಾಗಿವೆ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಅತ್ಯಂತ ಹೆಚ್ಚಿನ ಬಿಸಿಗಾಳಿ ವಲಯಗಳಾಗಿವೆ.
ಉತ್ತರ ಭಾರತದಲ್ಲಿ ಹೆಚ್ಚಿನ ಬಿಸಿಗಾಳಿ ಇರುತ್ತದೆ. ಈ ವಾರದಲ್ಲಿ ಅನೇಕ ಕಡೆಗಳಲ್ಲಿ ಶೇಕಡಾ 40 ಡಿಗ್ರಿಗೂ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಇದರಿಂದಾಗಿ ಸಾವಿನ ಸಂಖ್ಯೆಯಲ್ಲೂ ಹೆಚ್ಚಾಗಿರುವುದನ್ನು ಸಂಶೋಧನಾ ಪತ್ರಿಕೆ ಉಲ್ಲೇಖಿಸಿದೆ.