ನವದೆಹಲಿ|:ಕಂದಹಾರ್ ನಗರದ ಸಮೀಪ ತೀವ್ರ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಕಂದಹಾರ್‌ನ ರಾಯಭಾರಿ ಕಚೇರಿಯಲ್ಲಿ ಸುಮಾರು 50 ರಾಜತಾಂತ್ರಿಕರು ಮತ್ತು ಇತರ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಭಾರತ ಹೇಳಿದೆ.
ಸುಮಾರು ಎರಡು ದಶಕಗಳ ನಂತರ ಅಮೆರಿಕವು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದರಿಂದ ತಾಲಿಬಾನ್ ದೇಶದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಂತೆ ಹೋರಾಟ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ.
ದೂತಾವಾಸದಲ್ಲಿದ್ದ ಸಿಬ್ಬಂದಿಯನ್ನು ವಾಯುಪಡೆಯ ವಿಮಾನಗಳ ಮೂಲಕ ದಿಲ್ಲಿಗೆ ಕರೆ ತರಲಾಗಿದೆ.
"ಅಫ್ಘಾನಿಸ್ತಾನದಲ್ಲಿ ಬಿಗಡಾಯಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಸಿಬ್ಬಂದಿಗಳ ಸುರಕ್ಷತೆ ಹಾಗೂ ಭದ್ರತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಕಂದಹಾರ್ ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅನ್ನು ಮುಚ್ಚಲಾಗಿಲ್ಲ. ಆದಾಗ್ಯೂ, ಕಂದಹಾರ್ ನಗರದ ಸಮೀಪ ನಡೆಯುತ್ತಿರುವ ತೀವ್ರ ಹೋರಾಟದಿಂದಾಗಿ ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ. ಪರಿಸ್ಥಿತಿ ಸ್ಥಿರಗೊಳ್ಳುವ ತನಕ ಇದು ಸಂಪೂರ್ಣ ತಾತ್ಕಾಲಿಕ ಕ್ರಮ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ. ರಾಯಭಾರಿ ಕಚೇರಿ ನಮ್ಮ ಸ್ಥಳೀಯ ಸಿಬ್ಬಂದಿ ಸದಸ್ಯರ ಮೂಲಕ ಕಾರ್ಯನಿರ್ವಹಿಸುತ್ತಿದೆ "ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.