ಹೈದರಾಬಾದ್: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿಯನ್ನು ಭಾರತದಲ್ಲಿ ಮೇ 14ರಂದು ಬಳಕೆಗೆ ತಂದ ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬೊರೇಟರಿ ಲಿಮಿಟೆಡ್, ಪ್ರಾಯೋಗಿಕ ಯೋಜನೆಯನ್ನು 50ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿಸ್ತರಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಾ ರೆಡ್ಡೀಸ್ ಲ್ಯಾಬೊರೇಟರಿ, ಮುಂದಿನ ವಾರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ವಾಣಿಜ್ಯಾತ್ಮಕವಾಗಿ ಬಳಕೆಗೆ ವಿಸ್ತರಿಸುವಂತೆ ಮಾಡಲಾಗುವುದು ಎಂದು ಹೇಳಿದೆ.
ಹೈದರಾಬಾದ್ ನಲ್ಲಿ ಆರಂಭವಾದ ಲಸಿಕೆ ದೇಶದ 50ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಸ್ತರಿಸುವಂತೆ ತ್ವರಿತಗೊಳಿಸಲಾಗುವುದು ಎಂದು ಟ್ವೀಟ್ ಮೂಲಕ ಹೇಳಿದೆ.
ನೇರ ಹೂಡಿಕೆ ನಿಧಿಯಡಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಸುಮಾರು 3 ಮಿಲಿಯನ್ ಡೋಸ್ ಗಳನ್ನು ಡಾ ರೆಡ್ಡೀಸ್ ಪಡೆದುಕೊಂಡಿದ್ದು, 125 ಮಿಲಿಯನ್ ಜನರಿಗೆ ಡೋಸ್ ಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ.
ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ.