ಮಂಗಳೂರು; ಸಂಶೋಧನಾ ವಿದ್ಯಾರ್ಥಿನಿಯ ಪ್ರಬಂಧ ಅಂಗೀಕಾರಕ್ಕಾಗಿ ಲಂಚದ ಬೇಡಿಕೆ ಇಟ್ಟಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರದ ಸಹಾಯಕ ಪ್ರೊಫೆಸರ್ ಡಾ. ಅನಿತಾ ರವಿಶಂಕರ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಮಂಗಳೂರು ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಈ ಕುರಿತು ತೀರ್ಪು ನೀಡಿದೆ. 2012ರ ಡಿಸೆಂಬರ್ 4ರಂದು ಪ್ರೇಮ ಡಿಸೋಜ ಎಂಬ ಪಿಎಚ್‌ಡಿ ವಿದ್ಯಾರ್ಥಿನಿಯ ಪ್ರಬಂಧ ಅಂಗೀಕಾರಕ್ಕಾಗಿ ಡಾ. ಅನಿತಾ ರವಿಶಂಕರ್ ಲಂಚ ಕೇಳಿದ್ದರು.
ಫ್ರೊಫೆಸರ್ 16,800 ರೂಪಾಯಿಯ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ವಿಚಾರವನ್ನು ಲೋಕಾಯುಕ್ತ ಪೊಲೀಸರ ಗಮನಕ್ಕೆ ವಿದ್ಯಾರ್ಥಿನಿ ತಂದಿದ್ದರು. ಲಂಚ ಸ್ವೀಕಾರದ ವೇಳೆ ಆಗಿನ ಮಂಗಳೂರು ಲೋಕಾಯುಕ್ತ ನಿರೀಕ್ಷಕ ಉಮೇಶ್ ಜಿ. ಶೇಟ್ ಕಾರ್ಯಾಚರಣೆ ನಡೆಸಿ ಡಾ. ಅನಿತಾ ಶಂಕರ್ ಬಂಧಿಸಿದ್ದರು.
ಪ್ರಕರಣವನ್ನು ನ್ಯಾಯಾಲಯ ಸುಧೀರ್ಘ 10 ವರ್ಷಗಳ ಕಾಲ ವಿಚಾರಣೆ ನಡೆಸಿದ್ದು, ಈಗ ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಬಿ. ಜಕಾತಿ ತೀರ್ಪು ನೀಡಿದ್ದಾರೆ.
ಡಾ. ಅನಿತಾ ಶಂಕರ್‌ಗೆ 5 ವರ್ಷದ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ಒಟ್ಟು 9 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದು, ಆಗಿನ ಲೋಕಾಯುಕ್ತ ಇನ್ಸ್ ಪೆಕ್ಟರ್ ಉಮೇಶ್ ಜಿ. ಶೇಟ್ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ವಾದ ಮಂಡನೆ ಮಾಡಿದ್ದರು.