ನವದೆಹಲಿ: ಭಾರತದ ಜನಸಂಖ್ಯೆಯಲ್ಲಿ 6 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 67.6 ಮಂದಿಯಲ್ಲಿ ಕೋವಿಡ್ 19ರ ವಿರುದ್ಧ ರಕ್ಷಣೆ ಒದಗಿಸಬಲ್ಲ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ ಎಂದು ಭಾರತೀಯ ಆರೋಗ್ಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಜೂನ್ 14 ಮತ್ತು ಜುಲೈ 6ರ ನಡುವೆ ನಡೆಸಿದ ನಾಲ್ಕನೇ ಸುತ್ತಿನ ರಾಷ್ಟ್ರೀಯ ಸೆರೊಸರ್ವೆಯಲ್ಲಿ ಈ ಅಂಶ ಬೆಳಕಿಗೆ ಬಂದಿರುವುದಾಗಿ ಐಸಿಎಂಆರ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದೆ. ಪ್ರತಿಕಾಯಗಳ ಇರುವಿಕೆಯನ್ನು ತಿಳಿಯಲು ರಕ್ತದ ಸೀರಮ್ ಮೇಲೆ ನಡೆಸುವ ಅಧ್ಯಯನಕ್ಕೆ ಸೆರೊಸರ್ವೆ ಎನ್ನಲಾಗುತ್ತದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಆರೋಗ್ಯ ಕಾರ್ಯಕರ್ತರ ಪೈಕಿ ಶೇಕಡಾ 85.2 ಮಂದಿಯಲ್ಲಿ ಕೋವಿಡ್ ಪ್ರತಿಕಾಯಗಳು ಇರುವುದಾಗಿ ಐಸಿಎಂಆರ್ ತಿಳಿಸಿದೆ.
ಕೋವಿಡ್ ಸೆರೊಸರ್ವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ರಾಷ್ಟ್ರದಾದ್ಯಂತ ನಾಲ್ಕು ಸುತ್ತುಗಳ ಸೆರೊಸರ್ವೆಯನ್ನು ಐಸಿಎಂಆರ್ ನಡೆಸಿರುವುದಾಗಿ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
36,227 ಮಂದಿ ನಾಲ್ಕನೇ ಸುತ್ತಿನ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ 6-17 ವರ್ಷದ ಮಕ್ಕಳು, ಯುವ ಜನತೆ ಮತ್ತು ಆರೋಗ್ಯ ಕಾರ್ಯಕರ್ತರು ಇದ್ದರು. ಈ ಹಿಂದೆ 20 ರಾಜ್ಯಗಳ 70 ಜಿಲ್ಲೆಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರು ಸುತ್ತಿನ ಸಮೀಕ್ಷೆ ನಡೆಸಲಾಗಿತ್ತು.