ನವದೆಹಲಿ : ಭಾರತದಲ್ಲಿ ಕಳೆದ ಜನವರಿ ತಿಂಗಳಿಂದ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಿದ್ದು, ಈವರೆಗೆ 40 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 60 ಜನರಿಗೆ ಮಾತ್ರ ಗಂಭೀರವಾದ ಅಡ್ಡಪರಿಣಾಮಗಳ ಪ್ರಸಂಗಗಳು ಉಂಟಾಗಿವೆ ಎಂದು ಲಸಿಕೆಯ ಅಡ್ಡಪರಿಣಾಮಗಳ ಅಧ್ಯಯನ ಸಮಿತಿಯು ವರದಿ ನೀಡಿದೆ.
ನಾಷನಲ್ ಅಡ್ವರ್ಸ್ ಇವೆಂಟ್ಸ್ ಫಾಲೋಯಿಂಗ್ ಇಮ್ಯುನೈಸೇಷನ್ ಕಮಿಟಿಯು ಕೊರೊನಾ ಲಸಿಕೆ ಸಂಬಂಧಿಸಿದಂತೆ ಮೇ 27 ರಂದು ಅಧ್ಯಯನ ಪೂರ್ಣಗೊಳಿಸಿದ್ದು, ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಅದರನ್ವಯ ಒಟ್ಟು 60 ಜನರಿಗೆ ಲಸಿಕೆ ಪಡೆದ ನಂತರ ಗಂಭೀರ ಪರಿಣಾಮ ಉಂಟಾಗಿದೆ ಎನ್ನಲಾಗಿದೆ.
ಈ ಪ್ರಕರಣಗಳಲ್ಲಿ 55 ಜನರಿಗೆ ಲಸಿಕೆಯ ಕಾರಣದಿಂದ ಅಡ್ಡಪರಿಣಾಮ ಉಂಟಾಗಿದ್ದು, 36 ಜನರಿಗೆ ಆತಂಕ-ಸಂಬಂಧೀ ಪ್ರತಿಕ್ರಿಯೆ ಉಂಟಾಗಿದೆ ಮತ್ತು 18 ಜನರಿಗೆ ಉತ್ಪನ್ನ-ಸಂಬಂಧೀ ಪರಿಣಾಮವಾಗಿದೆ. ಒಬ್ಬರಲ್ಲಿ ಎರಡೂ ಬಗೆಯ ಪರಿಣಾಮ ಕಂಡುಬಂದಿದೆ. ಉಳಿದ 5 ಪ್ರಕರಣಗಳಲ್ಲಿ ಲಸಿಕೆಗೆ ಅಸಂಬದ್ಧವಾದ ಪರಿಣಾಮಗಳು ಕಂಡುಬಂದಿದ್ದು, ಒಂದು ಸಾವು ಸಂಭವಿಸಿದೆ. ಸಾವಿನ ಪ್ರಕರಣವನ್ನು 'ಕಾಕತಾಳೀಯ ಘಟನೆ' ಎಂದು ನಿರ್ಧರಿಸಲಾಗಿದ್ದು, ಲಸಿಕೆ ಪಡೆದ ನಂತರ ಸಂಭವಿಸಿದ್ದರೂ ಆ ಸಾವಿಗೆ ಸ್ಪಷ್ಟವಾದ ಅನ್ಯ ಕಾರಣವಿತ್ತು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಈವರೆಗೆ ಕಂಡುಬಂದಿರುವ ಅಲ್ಪಪ್ರಮಾಣದ ಅಪಾಯಕ್ಕೆ ಹೋಲಿಸಿದರೆ, ಕೊರೊನಾ ಲಸಿಕೆಯ ಒಟ್ಟಾರೆ ಉಪಯುಕ್ತತೆಯು ಬಹಳಷ್ಟಿದೆ ಎಂದು ಹೇಳಿರುವ ಸಮಿತಿಯು, ಮುನ್ನೆಚ್ಚರಿಕೆಗಾಗಿ, ಉಂಟಾಗುವ ಯಾವುದೇ ತೊಂದರೆಯನ್ನು ಆಗಿಂದಾಗ್ಗೆ ವಿಶ್ಲೇಷಿಸಲಾಗುತ್ತಿದೆ ಎಂದಿದೆ.