ನವದೆಹಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು 2ನೇ ಅಲೆ ಇಳಿಕೆಯಾಗುತ್ತಿದ್ದರು, ಕೆಲ ರಾಜ್ಯಗಳಲ್ಲಿ ಮಾತ್ರ ಸೋಂಕು ನಿಯಮಿತವಾಗಿ ಉಲ್ಪಣವಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದೆ.
ಕೋವಿಡ್-19 ನಿಯಂತ್ರಣ ಮತ್ತು ಧಾರಕ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ತಂಡಗಳನ್ನು 6 ರಾಜ್ಯಗಳಿಗೆ ರವಾನೆ ಮಾಡಿದ್ದು, ಸೋಂಕು ಉಲ್ಪಣವಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್‌ಗಢ, ಮತ್ತು ಮಣಿಪುರಕ್ಕೆ ಈ ವಿಶೇಷ ತಂಡಗಳನ್ನು ಕಳುಹಿಸಲಾಗುತ್ತಿದೆ.
ದೇಶದಲ್ಲಿ ಅತೀ ಹೊಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಅಗ್ರ ಮೂರು ಸ್ಥಾನದಲ್ಲಿದ್ದು, ಈ ಪೈಕಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಆದರೆ ಕೇರಳದಲ್ಲಿ ಮಾತ್ರ ಸೋಂಕು ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಲಾಗಿದ್ದು, ಈ ತಂಡಗಳು ರಾಜ್ಯಗಳ ಪರಿಸ್ಥಿತಿ ಅವಲೋಕಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸ್ಸು ಮಾಡಲಿದೆ.
ಭಾರತದಲ್ಲಿ ಇಂದು 46,617 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 3,04,58,251 ಕ್ಕೆ ತಲುಪಿದೆ, ಆದರೆ ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡಾ 97 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅಂತೆಯೇ ನಿನ್ನೆ 853 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 4,00,312 ಕ್ಕೆ ಏರಿಕೆಯಾಗಿದೆ.