ನವದೆಹಲಿ: ದೇಶದ ಬಹುತೇಕ ಕಡೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೆ, ಕೇರಳ ರಾಜ್ಯದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್ ಕೆ ಸಿಂಗ್ ನೇತೃತ್ವದ ತಂಡವು ಶುಕ್ರವಾರ ಕೇರಳ ತಲುಪಲಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
'ಕೇರಳದಲ್ಲಿ ಈಗಲೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎನ್‌ಸಿಡಿಸಿ ನಿರ್ದೇಶಕರ ನೇತೃತ್ವದ 6 ಸದಸ್ಯರ ತಂಡವನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರಕ್ಕೆ ಕೇಂದ್ರ ತಂಡ ನೆರವು ನೀಡಲಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ತಂಡವು ಕೇರಳದ ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ ಮತ್ತು ವೈರಸ್ ಹರಡುವುದನ್ನು ತಡೆಗಟ್ಟಲು ಅಗತ್ಯವಾದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಶಿಫಾರಸು ಮಾಡುತ್ತದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಸದ್ಯ, 1.54 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ದೇಶದ ಸಕ್ರಿಯ ಪ್ರಕರಣಗಳ ಪೈಕಿ ಶೇ. 37.1 ರಷ್ಟಿದೆ.
ರಾಜ್ಯದಲ್ಲಿ ದಿನನಿತ್ಯದ ಸರಾಸರಿ ಪ್ರಕರಣಗಳು 17,443 ಕ್ಕಿಂತ ಹೆಚ್ಚಿವೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯ ಶೇಕಡಾ 12.93 ರಷ್ಟು ಮತ್ತು ವಾರಕ್ಕೆ 11.97 ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ.
ಕಳೆದ ವಾರ ಬಕ್ರೀದ್ ಹಬ್ಬಕ್ಕೆ ಮೂರು ದಿನಗಳ ಕಾಲ ಕೋವಿಡ್ ನಿರ್ಬಂಧಗಳಿಗೆ ವಿನಾಯಿತಿ ಘೋಷಿಸಿದ್ದ ಕೇರಳದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಿಂದ ಆಕ್ಷೇಪ ವ್ಯಕ್ತವಾಗಿತ್ತು. ಕೋವಿಡ್ ಸಂಖ್ಯೆ ಏರುತ್ತಿರುವಾಗ ನಿರ್ಬಂಧ ಸಡಿಲಿಕೆ ಸರಿಯಲ್ಲ.ಇದರಿಂದಾಗಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಾದರೆ ಕಠಿಣ ಕ್ರಮ ಜರುಗಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಮಧ್ಯೆ, ಕೇರಳ ರಾಜ್ಯದಲ್ಲಿ ಸಂಪೂರ್ಣ ವಾರಾಂತ್ಯದ ಲಾಕ್‌ಡೌನ್ ಘೋಷಿಸಲಾಗಿದೆ.