ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಬುಧವಾರ ಮತ್ತೆ ಏರಿಕೆ ಕಂಡುಬಂದಿದೆ. ಕೆಲವು ದಿನಗಳಿಂದ ತಗ್ಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಜೂನ್ 29ರಿಂದ ಜುಲೈ 5ರವರೆಗೂ 17 ರಾಜ್ಯಗಳ 73 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10ಕ್ಕಂತ ಹೆಚ್ಚಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಹದಿನೇಳರಲ್ಲಿ 8 ರಾಜ್ಯಗಳು ಈಶಾನ್ಯ ರಾಜ್ಯಗಳಾಗಿವೆ ಎಂದು ಸಚಿವಾಲಯ ತಿಳಿಸಿದ್ದು, ಅರುಣಾಚಲ ಪ್ರದೇಶ, ರಾಜಸ್ಥಾನ, ಮಣಿಪುರ, ಕೇರಳ, ಮೇಘಾಲಯ, ತ್ರಿಪುರಾ, ಸಿಕ್ಕಿಂ, ಒಡಿಶಾ, ನಾಗಾಲ್ಯಾಂಡ್, ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ 73 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವುದಾಗಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.
ಈ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ 10%ಗೂ ಹೆಚ್ಚಿದೆ. "ಈಶಾನ್ಯ ರಾಜ್ಯಗಳಲ್ಲಿ ಪ್ರಕರಣಗಳು ಅಧಿಕವಿದೆ. ಹೀಗಾಗಿ ಅಲ್ಲಿ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಸೂಚಿಸಲಾಗಿದೆ" ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.
ಇದರ ಹೊರತಾಗಿ 65 ಜಿಲ್ಲೆಗಳಲ್ಲಿ 5-10% ಪಾಸಿಟಿವಿಟಿ ಪ್ರಮಾಣವಿದೆ. 595 ಜಿಲ್ಲೆಗಳಲ್ಲಿ 5%ಗೂ ಕಡಿಮೆ ಪಾಸಿಟಿವಿಟಿ ದರವಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 43,733 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಮಂಗಳವಾರ 34,703 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಕಳೆದ ಒಂದು ದಿನದಲ್ಲಿ ಸುಮಾರು 10 ಸಾವಿರ ಪ್ರಕರಣಗಳು ಏರಿಕೆಯಾಗಿದೆ.
4,59,920 ಸಕ್ರಿಯ ಪ್ರಕರಣಗಳಿವೆ, ಚೇತರಿಕೆ ಪ್ರಮಾಣ ಶೇ.97.18ರಷ್ಟಿದೆ. ಇದುವರೆಗೆ ಒಟ್ಟು 42,33,32,097 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಜುಲೈ 6 ರಂದು 19,07,216 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.