ಲಖನೌ: ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಜಯ ಸಾಧಿಸಿದ್ದು, ಸಮಾಜವಾದಿ ಪಕ್ಷ ತೀವ್ರ ಮುಖಭಂಗಕ್ಕೀಡಾಗಿದೆ.
ಉತ್ತರ ಪ್ರದೇಶದ 75 ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿಯು 67ರಲ್ಲಿ ಜಯ ಗಳಿಸಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿಯು ಕೇವಲ 6 ಜಿಲ್ಲೆಗಳಲ್ಲಿ ಜಯ ಗಳಿಸಿದೆ.
21 ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮತ್ತು ಒಂದು ಜಿಲ್ಲೆಯಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಯು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ''ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರದ ಆಡಳಿತವನ್ನು ಜನ ಮೆಚ್ಚಿದ್ದಾರೆ ಎಂಬುದಕ್ಕೆ ಪಂಚಾಯಿತಿ ಫಲಿತಾಂಶ ಸಾಕ್ಷಿ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿಯೂ ನಾವೇ ಗೆಲುವು ಸಾಧಿಸುತ್ತೇವೆ. ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಪ್ರಧಾನಿ, ಮುಖ್ಯಮಂತ್ರಿಯವರ ಜನಪ್ರಿಯತೆ ಕಾರಣದಿಂದ ಈ ಗೆಲುವು ಲಭಿಸಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯು ವಿಧಾನಸಭೆ ಚುನಾವಣೆ ದಿಕ್ಸೂಚಿಯಲ್ಲ, ಏಕೆಂದರೆ ಆಡಳಿತಾರೂಢ ಪಕ್ಷವೇ ಜಯ ಗಳಿಸುವುದು ಸಾಮಾನ್ಯ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ 2016ರಲ್ಲಿ ಅಂದು ಅಧಿಕಾರದಲ್ಲಿದ್ದ ಸಮಾಜವಾದಿ ಪಾರ್ಟಿಯು 60 ಜಿಲ್ಲೆಗಳ ಪಂಚಾಯಿತಿಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಆಗ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರು. ಮರುವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು!
ಮತ ಎಣಿಕೆ ವೇಳೆ ಬಿಜೆಪಿ ಮುಂಚೂಣಿಯಲ್ಲಿರುವ ಟ್ರೆಂಡ್ ತಿಳಿಯುತ್ತಲೇ ಸಮಾಜವಾದಿ ಪಾರ್ಟಿ ಕಾರ್ಯಕರ್ತರು, ''ಬಿಜೆಪಿಯು ಚುನಾವಣೆ ಅಕ್ರಮ ನಡೆಸಿದೆ,'' ಎಂದು ಆರೋಪಿಸಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದರು. ಆ ಪೈಕಿ ಪ್ರಯಾಗ್‌ರಾಜ್‌ನಲ್ಲಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.