ಕಾಸರಗೋಡು: ಆಝಾದಿ ಕಾ ಅಮೃತ್ ಮಹೋತ್ಸವ್ (ಸ್ವಾತಂತ್ರೋತ್ಸವದ 75ನೇ ವಾರ್ಷಿಕೋತ್ಸವ ) ಅಂಗವಾಗಿ ದೇಶಾದ್ಯಂತ ಒಂದು ವರ್ಷ ಕಾಲಾವಧಿಯ ವೈವಿಧ್ಯಮಯ ಸಮಾರಂಭಗಳು ಜರುಗಲಿವೆ.
ಕೇರಳ ರಾಜ್ಯದಲ್ಲಿ 75 ವಾರಗಳಲ್ಲಿ 75 ಕೇಂದ್ರಗಳಲ್ಲಿ ಕಾರ್ಯಕ್ರಮಗಳಿರುವುವು. ಮಾ.12ರಂದು ಕೊಲ್ಲಂ ಕುಂಡರದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ರಾಜ್ಯ ಮಟ್ಟದ ಉತ್ಸವವನ್ನು ಉದ್ಘಾಟಿಸುವರು.
ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಮೇಲ್ನೋಟದಲ್ಲಿ ಈ ಸಮಾರಂಭಗಳು ಜರುಗಲಿವೆ. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಜಿಲ್ಲಾ ಮಟ್ಟದ ಸಂಚಾಲಕರಾಗಿದ್ದಾರೆ.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಹಿತ ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಕ್ರಾಂತಿ, ಕಯ್ಯೂರು ಸಂಗ್ರಾಮ, ಕಾರಡ್ಕ ವನ ಸತ್ಯಾಗ್ರಹ ಇತ್ಯಾದಿಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳು ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸುವ ಮೂಲಕ ಜರುಗಲಿವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ, ವಸ್ತು ಪ್ರದರ್ಶನ, ವೀಡಿಯೋ ಪ್ರದರ್ಶನ, ಸಂಚಾರಿ ಪ್ರದರ್ಶನ, ವಿಚಾರಸಂಕಿರಣ, ಸಾಂಸ್ಕøತಿಕ ಕಾರ್ಯಕ್ರಮಗಳು ಇತ್ಯಾದಿ ನಡೆಯಲಿವೆ.
ಈ ಸಂಬಂಧ ನಡೆದ ಸಮಾಲೋಚನೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಗಳ ಬಗ್ಗೆ ಸಂಚಾಲಕ ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮಾಹಿತಿ ನೀಡಿದರು. ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್, ಜಿಲ್ಲಾ ಶಿಕ್ಷಣ ನಿರ್ದೇಶಕಿ ಕೆ.ವಿ.ಪುಷ್ಪಾ, ಡಿ.ಡಿ.ಪಿ. ಜೈಸನ್ ಮ್ಯಾಥ್ಯೂ, ಕುಟುಂಬಶ್ರೀ ಜಿಲ್ಲಾ ಸಮಿತಿ ಸಂಚಾಲಕ ಟಿ.ಟಿ.ಸುರೇಂದ್ರನ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ, ಕೇರಳ ಪಾರ್ತಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಎಂ.ಶಂಕರ ರೈ ಮಾಸ್ಟರ್, ಜಿಲ್ಲಾ ಯೂತ್ ಕಾರ್ಯಕ್ರಮ ಅಧಿಕಾರಿ ಕೆ.ಪ್ರಸೀದಾ ಮೊದಲಾದವರು ಉಪಸ್ಥಿತರಿದ್ದರು.