ಜಿನೀವಾ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಥ್ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ 'ಕೋವ್ಯಾಕ್ಸ್' ಲಸಿಕೆ ಅಭಿಯಾನದ ಅಡಿ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ ಅನುದಾನವಾಗಿ ನೀಡಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ "ವ್ಯಾಕ್ಸಿನ್ ಗ್ಲೋಬಲ್ ಆಕ್ಸೆಸ್- ಕೋವ್ಯಾಕ್ಸ್" ಕಾರ್ಯಕ್ರಮದಡಿ ಭಾರತವು 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆಯನ್ನು ಅನುದಾನವಾಗಿ ಪಡೆದುಕೊಳ್ಳಲಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಅವರು, 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆಯನ್ನು ಭಾರತ ಅನುದಾನವಾಗಿ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಜೂನ್ 29ರಂದು ಮುಂಬೈನಲ್ಲಿನ ಬಹುರಾಷ್ಟ್ರೀಯ ಔಷಧ ಕಂಪನಿಯಾದ ಸಿಪ್ಲಾ, ಭಾರತದಲ್ಲಿ ನಿರ್ಬಂಧಿತ ತುರ್ತು ಬಳಕೆಗೆ ಮಾಡೆರ್ನಾ ಕೊರೊನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಭಾರತೀಯ ಔಷಧ ನಿಯಂತ್ರಕ ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಕಾರ್ಯಕ್ರಮದಡಿ ಭಾರತಕ್ಕೆ ಕೆಲವು ಡೋಸ್‌ಗಳ ಲಸಿಕೆ ನೀಡಲು ಅಮೆರಿಕ ಸರ್ಕಾರ ಅನುಮತಿ ನೀಡಿರುವುದಾಗಿ ಡಿಸಿಜಿಐಗೆ ಜೂನ್ 27ರಂದು ಮಾಡೆರ್ನಾ ಮಾಹಿತಿ ನೀಡಿತ್ತು.
ಅಲ್ಲದೆ ಈ ಕುರಿತು ಕೇಂದ್ರ ಔಷಧ ನಿಯಂತ್ರಕ ಸಂಸ್ಥೆಯಿಂದ ಅನುಮತಿ ಕೂಡ ಕೋರಿತ್ತು. ಈ ನಡುವೆ ಲಸಿಕೆ ಕುರಿತು ಹಲವು ವಿಷಯಗಳ ಬಗ್ಗೆ ಭಾರತ ಸರ್ಕಾರ ಕೊರೊನಾ ಲಸಿಕೆ ತಯಾರಕರಾದ ಮಾಡೆರ್ನಾ ಹಾಗೂ ಫೈಜರ್ ಜೊತೆ ಚರ್ಚೆ ನಡೆಸುತ್ತಿದೆ.
ಭಾರತದಲ್ಲಿ ಮಾಡೆರ್ನಾ ಲಸಿಕೆ ಯಾವಾಗ ಲಭ್ಯ?
ಭಾರತದಲ್ಲಿ ಮಾಡೆರ್ನಾ ಲಸಿಕೆ ಲಭ್ಯತೆ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಲಸಿಕೆ ಲಭ್ಯತೆ ಕುರಿತ ಸ್ಪಷ್ಟ ಮಾಹಿತಿ ದೊರೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ನೀತಿ ಆಯೋಗ ಆರೋಗ್ಯ ವಿಭಾಗದ ಸದಸ್ಯ, ಡಾ. ವಿಕೆ ಪಾಲ್ ಅವರು, 'ಮಾಡರ್ನಾ ಅವರೊಂದಿಗೆ ಲಸಿಕೆ ಹೇಗೆ ಆಮದು ಮಾಡಿಕೊಳ್ಳಬಹುದು ಮತ್ತು ದೇಶದಲ್ಲಿ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂಬುದನ್ನು ನೋಡಲು ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಒಪ್ಪಂದದ ಮಾತುಕತೆಯ ಹಂತದಲ್ಲಿದ್ದು, ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅದು ಬೇಗನೆ ನಡೆಯುವ ಬಗ್ಗೆ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈಗ ಅವರಿಂದ ಯಾವಾಗ ಬೇಕಾದರೂ ಲಸಿಕೆ ಕೇಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.