ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿನ ಯೋಜನೆಯಡಿಯಲ್ಲೇ ಲಸಕೆ ಅಭಿಯಾನದಲ್ಲೂ ಸರ್ಕಾರ ಡಿಜಿಟಲ್ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಪ್ರಸ್ತುತ ಲಸಿಕೆ ಪಡೆದೆರುವ ಒಟ್ಟಾರೆ ಫಲಾನುಭವಿಗಳ ಪೈಕಿ ಶೇ.78ರಷ್ಟು ಮಂದಿ ಆನ್ ಸೈಟ್ ನೋಂದಣಿ ಮೂಲಕ ಲಸಿಕೆ ಪಡೆದಿದ್ದಾರೆ.
ಈ ಕುರಿತಂತೆ ಸ್ವತಃ ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿರುವ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದು, ಸರ್ಕಾರದ ನಿರಂತರ ಡಿಜಿಟಲ್ ಪರಿಕ್ರಮಗಳ ಹೊರತಾಗಿಯೂ ದೇಶದಲ್ಲಿ ವಿತರಣೆ ಮಾಡಲಾದ ಒಟ್ಟಾರೆ ಕೋವಿಡ್ ಲಸಿಕೆ ಪ್ರಮಾಣಗಳ ಪೈಕಿ ಶೇ.78ರಷ್ಟು ಪ್ರಮಾಣ ಆನ್ ಸೈಟ್ ವ್ಯಾಕ್ಸಿನೇಷನ್ ಆಗಿದೆ. ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಕೋವಿನ್ ಪೋರ್ಟಲ್ ಚಾಲನೆ ಮಾಡಿದ್ದು ಈ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ನಿಗಧಿತ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು. ಆದರೆ ಪ್ರಸ್ತುತ ಲಸಿಕೆ ಪಡೆದವರ ಪೈಕಿ ಶೇ.78ರಷ್ಟು ಮಂದಿ ಕೋವಿನ್ ನಲ್ಲಿ ನೋಂದಣಿ ಮಾಡದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿರುವ ಅಫಿಡವಿಟ್ ನಲ್ಲಿರುವಂತೆ, '23.06.2021ರಂತೆ, ಕೋವಿನ್‌ನಲ್ಲಿ ನೋಂದಾಯಿಸಲಾದ 32.22 ಕೋಟಿ ಫಲಾನುಭವಿಗಳಲ್ಲಿ, 19.12 ಕೋಟಿ (ಸುಮಾರು 59%) ಫಲಾನುಭವಿಗಳನ್ನು ಆನ್-ಸೈಟ್ ಮೋಡ್‌ನಲ್ಲಿ ನೋಂದಾಯಿಸಲಾಗಿದೆ" ಎಂದು ಕಳೆದ ವಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಕೋವಿನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೋವಿನ್‌ನಲ್ಲಿ ದಾಖಲಾದ ಒಟ್ಟು 29.68 ಕೋಟಿ ಲಸಿಕೆ ಪ್ರಮಾಣಗಳಲ್ಲಿ, 23.12 ಕೋಟಿ ಡೋಸ್‌ಗಳನ್ನು (78%) ಆನ್-ಸೈಟ್ / ವಾಕ್-ಇನ್ ವ್ಯಾಕ್ಸಿನೇಷನ್ ಮೂಲಕ ನೀಡಲಾಗಿದೆ ಎಂದು ಹೇಳಲಾಗಿದೆ.
ಕೋವಿನ್ ನಿರ್ವಹಣೆ ಕುರಿತು ಸಾಕಷ್ಟು ದೂರುಗಳು ಮತ್ತು ಟೀಕೆಗಳು ಕೇಳಿಬಂದಿತ್ತು. ಅಂತೆಯೇ ಕೋವಿನ್ ಆಯಪ್ ಕಾರ್ಯ ನಿರ್ವಹಣೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಈ ಹಿಂದೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಕೇಂದ್ರ ಸರ್ಕಾರವು ಈ ವರ್ಷದ ಜನವರಿ 16 ರಂದು ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆರಂಭಿಸಿ ಅದರ ಮೂಲಕ ಹಂತವಾರು ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನವನ್ನು ಲಸಿಕೆ ಪಡೆಯಲು ಪೂರ್ವ ನೋಂದಣಿ ಅಗತ್ಯವಾಗಿತ್ತು. ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್ ನೋಂದಣಿ ಸುಲಭಗೊಳಿಸುವ ಪ್ರಯತ್ನದಲ್ಲಿತ್ತು. ಹಿಂದಿ ಮಾತ್ರವಲ್ಲದೇ ಪೋರ್ಟಲ್ ನಲ್ಲಿ ಸರ್ಕಾರವು ಮರಾಠಿ, ಮಲಯಾಳಂ, ತೆಲುಗು, ಕನ್ನಡ, ಒಡಿಯಾ, ಗುರುಮುಖಿ, ಬಂಗಾಳಿ, ಸೇರಿದಂತೆ 14 ಪ್ರಾದೇಶಿಕ ಭಾಷೆಗಳು ಲಭ್ಯವಾಗುವಂತೆ ವಿವಿಧ ಬದಲಾವಣೆಗಳನ್ನು ಮಾಡಿದೆ. ಅಂತೆಯೇ ಅಸ್ಸಾಮೀಸ್, ತಮಿಳು ಮತ್ತು ಗುಜರಾತಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ತೆಗೆದುಹಾಕಲಾಗುತ್ತಿದೆ. ಆದರೆ ಆ ಬದಲಾವಣೆಗಳ ನಂತರವೂ, ಬಹುಪಾಲು ಜನರು ಡಿಜಿಟಲ್ ಅಲ್ಲದ ನೋಂದಣಿ ವಿಧಾನವನ್ನು ಆರಿಸಿಕೊಂಡಿದ್ದಾರೆ.
ವಾಕ್-ಇನ್ ವ್ಯಾಕ್ಸಿನೇಷನ್ ಸೌಲಭ್ಯವನ್ನು ಸರ್ಕಾರವು ಅನುಮತಿಸುವ ಮೊದಲು, ಕಡ್ಡಾಯ ಆನ್‌ಲೈನ್ ನೋಂದಣಿ ಭಾರತದ ಡಿಜಿಟಲ್ ಅವಲಂಭನೆಯನ್ನು ಹೆಚ್ಚಿಸಿತ್ತು. ಆದರೆ ಇದರಿಂದ ಶ್ರೀಮಂತ ಮತ್ತು ನಗರ ಭಾಗದ ಜನರು ಮಾತ್ರ ಪೋರ್ಟಲ್ ಬಳಕೆ ಮಾಡಿ ಲಸಿಕೆಗಾಗಿ ನೋಂದಣಿ ಮಾಡುತ್ತಿದ್ದರು. ಆದರೆ ಈ ವಿಚಾರದಲ್ಲಿ ಗ್ರಾಮೀಣಭಾಗದ ಜನರು ಹಿಂದೆ ಬೀಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಲಸಿಕಾ ಅಭಿಯಾನಕ್ಕೂ ಹಿನ್ನಡೆಯಾಗಿತ್ತು ಮತ್ತು ನಿಧಾನಗತಿಯಲ್ಲಿ ಸಾಗಿತ್ತು. ಕೋವಿನ್ ಪೋರ್ಟಲ್ ಅನ್ನು ನ್ಯಾವಿಗೇಟ್ ಮಾಡುವ ಸಂಕೀರ್ಣತೆಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯ ಮತ್ತು ಸ್ಮಾರ್ಟ್ಫೋನ್ಗಳ ಕೊರತೆಯು ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶದ ಜನರು ವ್ಯಾಕ್ಸಿನೇಷನ್ ಸೌಲಭ್ಯವನ್ನು ಪಡೆಯುವದನ್ನು ತಡೆಯುತ್ತಿದೆ ಎಂದು ಹೇಳಲಾಗಿತ್ತು.
ಹೀಗಾಗಿ ಸುಪ್ರೀಂ ಕೋರ್ಟ್ ಮೇ 31ರ ವಿಚಾರಣೆ ವೇಳೆ ಸರ್ಕಾರದ ಕಡ್ಡಾಯ ಆನ್‌ಲೈನ್ ನೋಂದಣಿಯನ್ನು ಖಂಡಿಸಿತ್ತು. ಅಂತೆಯೇ ದೇಶದಲ್ಲಿ ಅಸ್ತಿತ್ವದಲ್ಲಿರುವ ಡಿಜಿಟಲ್ ವಿಭಜನೆಯನ್ನು ಎತ್ತಿ ತೋರಿಸಿದ ನ್ಯಾಯಾಲಯ, ಪೋರ್ಟಲ್ ಅನ್ನು ಅವಲಂಬಿಸಿ ಸಾರ್ವತ್ರಿಕ ರೋಗನಿರೋಧಕ ಲಸಿಕಾ ಗುರಿಯನ್ನು ಸಾಧಿಸಲಾಗುವುದಿಲ್ಲ ಎಂದು ಕಿಡಿಕಾರಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಕೇಂದ್ರ ಸರ್ಕಾರ, ಯಾವುದೇ ಡಿಜಿಟಲ್ ವಿಭಜನೆಯಿಂದಾಗಿ ಯಾವುದೇ ವ್ಯಕ್ತಿಯನ್ನು ಬಿಟ್ಟುಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಆನ್ ಸೈಟ್ ನೋಂದಣಿ ಆರಂಭಿಸಿತ್ತು.