ನವದೆಹಲಿ: ಕೊರೊನಾ ಸೋಂಕಿನ ಸಂಬಂಧ ಕೇಂದ್ರ ಸರ್ಕಾರ ನಾಲ್ಕನೇ ಸೆರೋ ಸರ್ವೇ ನಡೆಸಿದ್ದು, ಅದರ ಫಲಿತಾಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಸಂಬಂಧ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.
ಬಹುಮುಖ್ಯವಾಗಿ ಕೊರೊನಾ ಸೋಂಕಿನಿಂದ ಚೇತರಿಕೆಯಾದ ನಂತರ ಅಥವಾ ಕೊರೊನಾ ಲಸಿಕೆಯಿಂದ 67.6% ಭಾರತೀಯರಲ್ಲಿ ಸೋಂಕಿನ ವಿರುದ್ಧ ಹೋರಾಟಕ್ಕೆ ಪ್ರತಿಕಾಯಗಳು ಬೆಳವಣಿಗೆಯಾಗಿರುವುದಾಗಿ ತಿಳಿಸಿದೆ. ಇದರ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದಾಗಿ ತಿಳಿಸಿದೆ. ಆದರೆ ಕೊರೊನಾ ಮೂರನೇ ಅಲೆ ಆತಂಕವೂ ಎದುರಾಗಿವುದರಿಂದ ಜನರಿಗೆ ಕೇಂದ್ರ ಕೆಲವು ಸಲಹೆಗಳನ್ನು ನೀಡಿದೆ. ಜನರ ಆರೋಗ್ಯ ದೃಷ್ಟಿಯಿಂದ ಏಳು ಸಲಹೆಗಳನ್ನು ಮುಂದಿಟ್ಟಿದೆ.
ಎರಡು ಡೋಸ್ ಲಸಿಕೆ ಪಡೆಯದೇ ಎಲ್ಲಿಗೂ ಪಯಣಿಸಬೇಡಿ:
ಮತ್ತೊಂದು ಅಲೆಯ ಭೀತಿ ಎದುರಾಗಿರುವ ಈ ಸಮಯದಲ್ಲಿ ಜನರು ಆದಷ್ಟು ಎಲ್ಲಿಗೂ ಪ್ರಯಾಣ ಬೆಳೆಸದೇ ಇರುವುದು ಸೂಕ್ತ. ಅದರಲ್ಲೂ ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆಯದೇ ಪ್ರಯಾಣ ಕೈಗೊಳ್ಳುವುದು ಸೂಕ್ತವಲ್ಲ ಎಂದು ತಿಳಿಸಿದೆ.
ಭವಿಷ್ಯದಲ್ಲಿ ಇನ್ನಷ್ಟು ಸೋಂಕಿನ ಅಲೆಗಳು ನಿರೀಕ್ಷಿತ:
ಕೆಲವು ರಾಜ್ಯಗಳಲ್ಲಿ ಇನ್ನೂ ಕೊರೊನಾ ಪ್ರಕರಣಗಳು ತಗ್ಗಿಲ್ಲ. ಕೆಲವು ಕಡೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೆ, ಕೆಲವು ಕಡೆಗಳಲ್ಲಿ ಕಡಿಮೆಯಿದೆ. ಕೆಲವು ರಾಜ್ಯಗಳ ಜನರಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಪ್ರಮಾಣ ಹೆಚ್ಚಿದ್ದರೆ, ಕೆಲವಷ್ಟು ರಾಜ್ಯಗಳಲ್ಲಿ ಕಡಿಮೆ ಇದೆ. ಹೀಗಾಗಿ ಭವಿಷ್ಯದಲ್ಲಿ ಇನ್ನಷ್ಟು ಸೋಂಕಿನ ಅಲೆಗಳ ಸಾಧ್ಯತೆಯಿದೆ ಎಂಬ ಅಂಶವನ್ನು ಸೆರೊ ಸರ್ವೇ ವರದಿ ಮಾಡಿರುವುದಾಗಿ ಕೇಂದ್ರ್ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕು ಯಾವ ಸಮಯದಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಅಂದಾಜಿಸುವುದು ಸಾಧ್ಯವಿಲ್ಲ ಎಂದು ಹೇಳಿದೆ.ರಾಜ್ಯ ಮಟ್ಟದ ಕ್ರಮ ಅಗತ್ಯವಿದೆ
ರಾಜ್ಯದ ಎಷ್ಟು ಶೇಕಡಾವಾರು ಜನರಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಎಷ್ಟರ ಮಟ್ಟಿಗೆ ಪ್ರತಿಕಾಯ ಸೃಷ್ಟಿಯಾಗಿದೆ ಎಂಬುದನ್ನು ರಾಜ್ಯ ಮಟ್ಟದಲ್ಲಿ ಸೆರೋ ಸರ್ವೆ ನಡೆಸಿ ವಿಸ್ತೃತ ಮಾಹಿತಿಯನ್ನು ಪಡೆಯಬೇಕು ಎಂದು ಕೇಂದ್ರ ಸೂಚಿಸಿದೆ.
ದೇಶ, ರಾಜ್ಯಗಳ ಒಟ್ಟಾರೆ ಪರಿಸ್ಥಿತಿ ಭಿನ್ನವಿರಬಹುದು!
ದೇಶದ ಒಟ್ಟಾರೆ ಸ್ಥಿತಿಗತಿಗೂ ರಾಜ್ಯ, ಸ್ಥಳೀಯ ಅಥವಾ ಜಿಲ್ಲಾ ಮಟ್ಟದ ಪರಿಸ್ಥಿತಿಗೂ ತುಂಬಾ ಭಿನ್ನತೆಯಿರಬಹುದು. ದೇಶದ ಒಟ್ಟಾರೆ ಸೋಂಕಿನ ಪರಿಸ್ಥಿತಿಯನ್ನಷ್ಟೇ ಸೆರೋ ಸರ್ವೇ ಅಂದಾಜಿಸುತ್ತದೆ. ಇದು ಒಂದು ಪಕ್ಷಿನೋಟವಷ್ಟೆ. ಆಳ ಅಧ್ಯಯನವನ್ನು ರಾಜ್ಯ ಸರ್ಕಾರಗಳು ನಡೆಸಬೇಕು ಎಂದು ತಿಳಿಸಿದೆ.
ನಿಯಮ ಮುರಿಯಲು ಅವಕಾಶವಿಲ್ಲ:
ಈಗಿನ ಸೆರೋ ಸರ್ವೇ ಫಲಿತಾಂಶ ಭರವಸೆ ವ್ಯಕ್ತಪಡಿಸಿದೆ. ಆದರೆ ಕೊರೊನಾ ನಿಯಮಗಳನ್ನು ಮುರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜನಸಂಖ್ಯೆಯ 32% ಮಂದಿಗೆ ಸೋಂಕು ತಗುಲುವ ಭೀತಿ ಇದೆ. ಹೀಗಾಗಿ ಕೊರೊನಾ ನಿಯಮಗಳ ಪಾಲನೆಯಲ್ಲಿ ಯಾವುದೇ ಆಯ್ಕೆಯನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದೆ.
ಅನವಶ್ಯಕ ಪ್ರಯಾಣಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು:
ಜುಲೈ ಮೊದಲ ವಾರದಲ್ಲಿ ಹಲವು ರಾಜ್ಯಗಳು ಕೊರೊನಾ ನಿರ್ಬಂಧಗಳನ್ನು ಸಡಿಲಿಸಿದವು. ಆ ಬೆನ್ನಲ್ಲೇ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಯಿತು. ಪ್ರವಾಸಿ ತಾಣಗಳಿಗೆ ಸಾಗರದಂತೆ ಜನ ನುಗ್ಗಲು ಆರಂಭಿಸಿದರು. ಸ್ಥಳೀಯ ಮಾರುಕಟ್ಟೆಗಳದ್ದೂ ಇದೇ ಪರಿಸ್ಥಿತಿ. ಆದರೆ ಇದು ಉತ್ತಮ ಬೆಳವಣಿಗೆಯಲ್ಲ. ಅವಶ್ಯಕವಿಲ್ಲದ ಪ್ರಯಾಣಕ್ಕೆ ರಾಜ್ಯ ಸರ್ಕಾರಗಳು ಅವಕಾಶ ನೀಡಬಾರದು ಎಂದು ಸೂಚಿಸಿದೆ.
ಜನಸಂದಣಿಯಿಂದ ದೂರವುಳಿಯಲು ಸೂಚನೆ:
ಹಲವು ರಾಜ್ಯಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರುವುದನ್ನು ನಿಷೇಧಿಸಿವೆ. ಆದರೂ ಜನರು ತಮ್ಮ ಸ್ವಯಂ ಜಾಗೃತಿಯಿಂದ ಜನಸಂದಣಿಯಿಂದ ದೂರವುಳಿಯಬೇಕು ಎಂದು ಹೇಳಿದೆ.