ಕಾಬೂಲ್: ಇರಾನ್ ಅಫ್ಘಾನಿಸ್ತಾನದ ಪ್ರಮುಖ ವ್ಯಾಪಾರ ಮಾರ್ಗದಲ್ಲಿ ಒಂದಾದ ಇಸ್ಲಾಂ ಖುಲಾ ಗಡಿ ಪಟ್ಟಣ ಮತ್ತು ತುರ್ಕ್ ಮೇನಿಸ್ತಾನದ ಮತ್ತೊಂದು ವ್ಯಾಪಾರ ಮಾರ್ಗವಾಗಿರುವ ತೋರ್ಘುಂಡಿ ಗಡಿ ಪಟ್ಟಣವು ತಾಲಿಬಾನ್ ವಶವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ 85 ಪ್ರತಿಶತದಷ್ಟು ಅಫ್ಘಾನ್ ಪ್ರಾಂತ್ಯವನ್ನು ನಾವು ನಿಯಂತ್ರಿಸುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ.
ಎರಡೂ ಪ್ರಮುಖ ಗಡಿ ಪಟ್ಟಣಗಳು ದೇಶದ ಹೆರಾತ್ ಪ್ರಾಂತ್ಯದಲ್ಲಿವೆ. ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಇರಾನ್, ತಜಿಕಿಸ್ತಾನ್, ತುರ್ಕ್ ಮೆನಿಸ್ತಾನ್, ಚೀನಾ ಮತ್ತು ಪಾಕಿಸ್ತಾನ- ಐದು ದೇಶಗಳ ಗಡಿಯಲ್ಲಿನ ಪ್ರದೇಶಗಳನ್ನು ತಾಲಿಬಾನ್ ಆಕ್ರಮಿಸಿದೆ ಎಂದು ಅರಿಯಾನಾ ನ್ಯೂಸ್ ವರದಿ ಮಾಡಿದೆ.
ಇಸ್ಲಾಂ ಖುಲಾ ತಾಲಿಬಾನ್ ಗೆ ವಶವಾದ ನಂತರ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಹೆರಾತ್ ಕಸ್ಟಮ್ಸ್ ವಿಭಾಗದ ಹಿರಿಯ ಅಧಿಕಾರಿ ನಿಸಾರ್ ಅಹ್ಮದ್ ನಾಸೇರಿ ಹೇಳಿದ್ದಾರೆ.
ತಾಲಿಬಾನ್ ಎರಡು ಮಹತ್ವದ ಗಡಿ ಪಟ್ಟಣಗಳನ್ನು ವಶಪಡಿಸಿಕೊಂಡಿದೆ ಎಂದು ಪ್ರಾಂತ್ಯದ ಮೂಲಗಳು ಟೋಲೋ ಸುದ್ದಿಸಂಸ್ಥೆಗೆ ತಿಳಿಸಿವೆ, ಅಲ್ಲಿ ಬೀಡುಬಿಟ್ಟಿರುವ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ತಾಲಿಬಾನ್ ಪ್ರವೇಶಿಸಿದ ನಂತರ ಇರಾನ್‌ಗೆ ಗಡಿ ದಾಟಿ ಹೋಗಿವೆ.