ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್ ಆಗಿ ಸೇವೆ ಸಲ್ಲಿಸಲು ಬಯಸಿ ಅರ್ಜಿ ಸಲ್ಲಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಶಾಕ್ ನೀಡಿದೆ. ಕಳೆದ ನವೆಂಬರ್ 20ರಂದು 8500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕರೆದಿದ್ದ ಅರ್ಜಿಯನ್ನು ರದ್ದುಗೊಳಿಸಿದೆ. ಈ ಮೂಲಕ ಲಕ್ಷಾಂತರ ಅಭ್ಯರ್ಥಿಗಳ ಕನಸು ನುಚ್ಚುನೂರಾಗಿದೆ.
ಅನಿವಾರ್ಯ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದ್ದು, ಅಭ್ಯರ್ಥಿಗಳು ಸಂದಾಯ ಮಾಡಿರುವ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ ಎಂಬುದಾಗಿ ಎಸ್ಬಿಐ ಹೇಳಿದೆ. ಆದರೆ ಈ ಶುಲ್ಕ ವಾಪಸ್ ಹೇಗೆ ನೀಡುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಬ್ಯಾಂಕ್ ಹಣವನ್ನು ಅಭ್ಯರ್ಥಿಗಳ ಖಾತೆಗೆ ಜಮಾ ಆಗಬಹುದು ಇಲ್ಲವೇ ನಿಗದಿತ ನಮೂನೆ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಿ ಸಲ್ಲಿಸಬೇಕಾಗಬಹುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಬ್ಯಾಂಕ್ ತಿಳಿಸಲಿದೆ.
ಆದರೆ ಇದೇ ವೇಳೆ ಹೊಸದಾಗಿ 6100 ಹುದ್ದೆಗಳ ನೇಮಕಾತಿಗೆ ಎಸ್ಬಿಐ ಹೊಸದಾಗಿ ಅರ್ಜಿ ಕರೆದಿದೆ. ಈ ಅರ್ಜಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.