ನವದೆಹಲಿ: ಕೋವಿಶೀಲ್ಡ್ ಕೋವಿಡ್ -19 ರ ವಿರುದ್ಧ ಶೇಖಡ 93ರಷ್ಟು ರಕ್ಷಣೆ ನೀಡುತ್ತದೆ. ಅಲ್ಲದೆ ಶೇ 98 ರಷ್ಟು ಮರಣ ಪ್ರಮಾಣ ಕಡಿತವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೊರೋನಾ ಎರಡನೇ ಅಲೆ ಕುರಿತಂತೆ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು(ಎಎಫ್‌ಎಂಸಿ) ನಡೆಸಿದ ಅಧ್ಯಯನದ ಮೂಲಕ ತಿಳಿದುಬಂದಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‌ಐಟಿಐ ಆಯೋಗ್ ಸದಸ್ಯ(ಆರೋಗ್ಯ) ಡಾ. ವಿಕೆ ಪಾಲ್ ಅವರು 15 ಲಕ್ಷ ವೈದ್ಯರು ಮತ್ತು ಮುಂಚೂಣಿ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನದ ಆವಿಷ್ಕಾರಗಳನ್ನು ಮಂಡಿಸಿದರು.
ಈ ಮೂಲಕ ಕೋವಿಶೀಲ್ಡ್ ನಿಂದ ಶೇಕಡ 93ರಷ್ಟು ರಕ್ಷಣೆ ಕಂಡುಬಂದಿದೆ. ಅಲ್ಲದೆ ಶೇಕಡ 98ರಷ್ಟು ಮರಣ ಕಡಿತ ಕಂಡುಬಂದಿದೆ ಎಂದು ಪಾಲ್ ಹೇಳಿದರು.
ಕೊರೋನಾ ವಿರುದ್ಧದ ಹೋರಾಡುವಲ್ಲಿ ಲಸಿಕೆಗಳ ಉಪಯುಕ್ತತೆಯನ್ನು ಪುನರುಚ್ಚರಿಸಿದ ಪಾಲ್, ಇನಾಕ್ಯುಲೇಷನ್ ಸೋಂಕನ್ನು ಕಡಿಮೆ ಮಾಡುತ್ತದೆ. ಆದರೆ ಇದು ಪೂರ್ಣಪ್ರಮಾಣವಲ್ಲ ಎಂದು ಹೇಳಿದರು.
ದಯವಿಟ್ಟು ಜಾಗರೂಕರಾಗಿರಿ, ನಮ್ಮ ಲಸಿಕೆಗಳ ಬಗ್ಗೆ ನಂಬಿಕೆ ಇರಿಸಿ. ಮುಂದಿನ ದಿನಗಳಲ್ಲಿ ಜಾಗರೂಕರಾಗಿರಿ ಎಂದು ನಾನು ನಿಮ್ಮನ್ನು ಕೋರುತ್ತೇನೆ ಎಂದು ಹೇಳಿದರು.