ನವದೆಹಲಿ: ಸಹಕಾರ ಸಂಘಗಳ ನಿರ್ವಹಣೆಗೆ ಸಂಬಂಧಿಸಿ ಸಂವಿಧಾನದ 97ನೇ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಸಂಘಗಳ ರಚನೆ ಹಾಗೂ ಕಾರ್ಯಾಚರಣೆ ಕುರಿತ ತಿದ್ದುಪಡಿಯ ಭಾಗವನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಆರ್.ಎಫ್.ನರೀಮನ್, ಕೆ.ಎಂ.ಜೋಸೆಫ್ ಹಾಗೂ ಬಿ.ಆರ್.ಗವಾಯಿ ಅವರಿರುವ ನ್ಯಾಯಪೀಠ, ಈ ವಿಷಯ ಕುರಿತು 2:1ರ ಬಹುಮತದ ತೀರ್ಪು ಪ್ರಕಟಿಸಿತು.
'ಸಹಕಾರ ಸಂಘಗಳಿಗೆ ಸಂಬಂಧಿಸಿ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಭಾಗವನ್ನು (IX ಬಿ) ರದ್ದುಪಡಿಸಿದ್ದೇವೆ. ಆದರೆ, ತಿದ್ದುಪಡಿಯನ್ನು ಎತ್ತಿ ಹಿಡಿದಿದ್ದೇವೆ' ಎಂದು ನ್ಯಾಯಪೀಠ ಹೇಳಿತು.
'ನ್ಯಾಯಮೂರ್ತಿ ಜೋಸೆಫ್ ಅವರು ಇಡೀ ತಿದ್ದುಪಡಿಯನ್ನು ರದ್ದುಪಡಿಸುವ ತೀರ್ಪು ನೀಡಿದ್ದಾರೆ' ಎಂದು ನ್ಯಾಯಮೂರ್ತಿ ನರೀಮನ್ ಹೇಳಿದರು.
ಸಂವಿಧಾನದ 97ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ 2013ರಲ್ಲಿ ನೀಡಿರುವ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪು ಇದಾಗಿದೆ.
ರಾಜ್ಯಪಟ್ಟಿಯಲ್ಲಿರುವ ಸಹಕಾರಿ ಕ್ಷೇತ್ರದ ಸೊಸೈಟಿಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಸಂಸತ್‌ಗೆ ಅವಕಾಶ ಇಲ್ಲ ಎಂದು ತಿಳಿಸಿದ್ದ ಗುಜರಾತ್ ಹೈಕೋರ್ಟ್, ತಿದ್ದುಪಡಿಯ ಕೆಲವು ಅಂಶಗಳನ್ನು ತಿರಸ್ಕರಿಸಿತ್ತು.
ಸಹಕಾರಿ ಸೊಸೈಟಿಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿದ್ದ ಸಂವಿಧಾನದ 97ನೇ ತಿದ್ದುಪಡಿಗೆ ಸಂಸತ್ 2011ರ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ನಂತರ, 2012ರ ಫೆಬ್ರುವರಿ 15ರಿಂದ ಜಾರಿಗೊಳಿಸಲಾಗಿತ್ತು.