ನವದೆಹಲಿ: ಲಸಿಕೆ ವಿರುದ್ಧ ಅಪಪ್ರಚಾರ ಕೇಳಿ ಬರುತ್ತಿರುವ ಮಧ್ಯೆಯೇ ಲಸಿಕೆ ಪಡೆಯದೆ ಸೋಂಕಿಗೆ ಒಳಗಾದವರೇ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂಬ ಅಂಶವೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೋವಿಡ್ನಿಂದ ಮೃತಪಟ್ಟವರಲ್ಲಿ ಬಹುತೇಕ ಜನರು ಲಸಿಕೆ ಪಡೆಯದವರೇ ಎಂಬುದನ್ನು ರೋಗ ಪರಿಣತರು ತಿಳಿಸಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದ ಸಾವನ್ನು ತಪ್ಪಿಸಲು ಸಾಧ್ಯವಾಗಿದ್ದರೂ ಸಂಭವಿಸಿರುವುದು ದುಃಖಕರ ಹಾಗೂ ದುರಂತ ಎಂಬುದಾಗಿ ಅಮೆರಿಕದ ಸಾಂಕ್ರಾಮಿಕ ರೋಗಗಳ ಪರಿಣತ ಡಾ. ಅಂಥೋಣಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಸದ್ಯ ಜಗತ್ತಿನಲ್ಲೇ ಅತಿಹೆಚ್ಚು ಕೋವಿಡ್ ಸಾವನ್ನು ಕಂಡಿರುವ ದೇಶವಾಗಿದ್ದು, ಇಲ್ಲಿ ಈಗಾಗಲೇ ಅತಿ ಹೆಚ್ಚು ಎಂದರೆ 6.05 ಲಕ್ಷ ಮಂದಿ ಕರೊನಾದಿಂದಾಗಿ ಮೃತಪಟ್ಟಿದ್ದಾರೆ. ಅದರಲ್ಲೂ ಇತ್ತೀಚೆಗೆ ಕೋವಿಡ್ನಿಂದಾಗಿ ಮೃತಪಟ್ಟಿರುವವರಲ್ಲಿ ಶೇ.99.2 ಮಂದಿ ಲಸಿಕೆ ಪಡೆದಿರಲಿಲ್ಲ. ಅವರು ವ್ಯಾಕ್ಸಿನೇಷನ್ಗೆ ಒಳಗಾಗಿದ್ದರೆ ಸಾವನ್ನು ಬಹುತೇಕ ತಪ್ಪಿಸಬಹುದಿತ್ತು ಎಂದು ಫೌಸಿ ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಕುರಿತ ಭಿನ್ನಾಭಿಪ್ರಾಯಗಳು ಏನೇ ಇರಲಿ. ಈಗ ಎಲ್ಲರಿಗೂ ಒಂದೇ ವೈರಿ ಎಂದರೆ ವೈರಸ್ ಎಂಬುದು ಮನದಲ್ಲಿರಲಿ. ಇದನ್ನು ಮನಗಂಡು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಕೆಲವು ಕಡೆ ಜನರು ಲಸಿಕೆಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧವಿದ್ದಾರೆ. ಹೀಗಿರುವಾಗ ಲಸಿಕೆ ಲಭ್ಯವಿರುವಾಗಲೂ ಹಾಕಿಸಿಕೊಳ್ಳಲು ಹಿಂಜರಿಯುವುದು ಒಳ್ಳೆಯದಲ್ಲ ಎಂಬುದಾಗಿ ಅವರು ಹೇಳಿದ್ದಾರೆ.