ಟೋಕಿಯೊ: ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರ್ಯಾಂಕಿಂಗ್ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಈ ಮೂಲಕ ಆರಂಭದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.
ವಿಶ್ವದ ನಂಬರ್ 1 ಬಿಲ್ಲುಗಾರಿಕಾ ಪಟು ದೀಪಿಕಾ ಕುಮಾರಿ ಇಂದು ಮುಕ್ತಾಯವಾದ ಪಂದ್ಯದಲ್ಲಿ 663 ಅಂಕಗಳನ್ನು ಪಡೆದರೆ, ಕೊರಿಯಾದ ಅನ್ ಸಾನ್ 680 ಅಂಕಗಳನ್ನು ಗಳಿಸುವ ಮೂಲಕ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಸಾಕಷ್ಟು ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ದೀಪಿಕಾ ಮೊದಲ ಸುತ್ತಿನಲ್ಲಿ 56 ಅಂಕ ಗಳಿಸಿದರು. ನಂತರ ಎರಡನೇ ಸುತ್ತಿನಲ್ಲಿ 55 ಅಂಕಗಳನ್ನು ಗಳಿಸುವ ಮೂಲಕ ಟಾಪ್ 10 ಹಂತಕ್ಕೆ ಲಗ್ಗೆಯಿಟ್ಟರು. ಆದರೆ ನಾಲ್ಕನೇ ಸುತ್ತಿನಲ್ಲಿ ಕೇವಲ 51 ಅಂಕಗಳಿಸಿದ ದೀಪಿಕಾ 14ನೇ ಸ್ಥಾನಕ್ಕೆ ಜಾರಿದರು. ಆದರೆ ಐದನೇ ಸುತ್ತಿನಲ್ಲಿ 59 ಅಂಕಗಳನ್ನು ಗಳಿಸಿ ದಿಢೀರ್ ಕಮ್‌ಬ್ಯಾಕ್ ಮಾಡುವಲ್ಲಿ ದೀಪಿಕಾ ಯಶಸ್ವಿಯಾದರು.
ದೀಪಿಕಾ ಕುಮಾರಿ ಇದೀಗ ಎಲಿಮಿನೇಟರ್ ಸುತ್ತಿನಲ್ಲಿ ಭೂತಾನ್‌ನ ಕರ್ಮಾ ಭೂ ಅವರನ್ನು ಎದುರಿಸಲಿದ್ದಾರೆ. ಇನ್ನು ಕೊರಿಯಾದ ಆನ್ ಸಾನ್(680), ಮಿನ್ಹೆ ಜಂಗ್(677) ಹಾಗೂ ಚೇಯೊಂಗ್ ಕಾಂಗ್(675) ಅಂಕ ಗಳಿಸುವ ಮೂಲಕ ಮೊದಲ ಮೂರು ಸ್ಥಾನಗಳನ್ನು ಪಡೆದರು. ಭೂತಾನ್ ನ ಕರ್ಮ ರ್ಯಾಂಕಿಂಗ್ ಸುತ್ತಿನಲ್ಲಿ 56ನೇ ಸ್ಥಾನ ಪಡೆದಿದ್ದಾರೆ. 2019 ರಲ್ಲಿ ಇಲ್ಲಿ ನಡೆದಿದ್ದ ಒಲಿಂಪಿಕ್ ಟೆಸ್ಟ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಅವರು ನೇರ ಸೆಟ್ ಗಳಿಂದ ಸೋಲನುಭವಿಸಿದ್ದರು.
ಮಹಿಳೆಯರ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ವೈಯಕ್ತಿಕ ಶ್ರೇಯಾಂಕದ ಸುತ್ತಿನಲ್ಲಿ ಹಿಂದಿನ ಒಲಿಂಪಿಕ್ ದಾಖಲೆಯ ಸ್ಕೋರ್ 673 ಆಗಿದ್ದು, ಉಕ್ರೇನ್‌ನ ಲೀನಾ ಗೆರಾಸಿಮೆಂಕೊ ಅವರು ಅಟ್ಲಾಂಟಾದಲ್ಲಿ 1996ರಲ್ಲಿ ನಡೆದಿದ್ದ ಒಲಿಂಪಿಕ್ ಸ್ಪರ್ಧೆಯಲ್ಲಿ ದಾಖಲೆ ಪಡೆದಿದ್ದರು.