ನವದೆಹಲಿ: ಸಂಸತ್ ಕೆಳಮನೆ ಎನಿಸಿರುವ ಲೋಕಸಭೆಯು ಬುಧವಾರ ಸಂಸದರ ಅಶಿಸ್ತಿನ ನಡೆಗೆ ಸಾಕ್ಷಿಯಾಯಿತು. ಸದನದ ಬಾವಿಗಿಳಿದ ಸಂಸದರು ಪೆಗಾಸಸ್ ಬೇಹುಗಾರಿಕೆ ಹಾಗೂ ರೈತರ ಸಮಸ್ಯೆಗಳ ಕುರಿತು ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ಫಲಕಗಳನ್ನು ಹಿಡಿದರು. ಕೆಲವು ಸದಸ್ಯರು ಕಾಗದ ಮತ್ತು ಪತ್ರಗಳನ್ನು ಕುರ್ಚಿಗಳ ಮೇಲೆ ಎಸೆದರು.
ಲೋಕಸಭೆಯಲ್ಲಿ ಅಶಿಸ್ತು ತೋರಿದ ಹಿನ್ನೆಲೆ 9 ಸಂಸದರನ್ನು ಅಮಾನತುಗೊಳಿಸುವ ಸಾಧ್ಯತೆಯಿದೆ ಎಂದು ಎಎನ್‌ಐ ವರದಿ ಮಾಡಿದೆ. ಈ ಪೈಕಿ ಗುರ್ಜಿತ್ ಸಿಂಗ್, ಟಿ ಎನ್ ಪ್ರತಾಪನ್, ಮಾಣಿಕ್ಕಂ ಠಾಗೋರ್, ರವನೀತ್ ಸಿಂಗ್ ಬಿಟ್ಟು, ಹಿಬಿ ಈಡನ್, ಜ್ಯೋತಿಮಣಿ ಸೆನ್ನಿಮಾಲೈ, ಸಪ್ತಗಿರಿ ಶಂಕರ್ ಉಲ್ಕಾ, ವಿ ವೈಥಿಲಿಂಗಂ, ಎಎಂ ಆರೀಫ್, ಅಮಾನತುಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲೋಕಸಭೆಯಲ್ಲಿ ಪ್ರತಿಪಕ್ಷದ ಸಂಸದರು ಕಾಗದ ಪತ್ರಗಳನ್ನು ಹರಿದು ಕುರ್ಚಿಗಳ ಮೇಲೆ ಎಸೆದು ಗದ್ದಲ ಸೃಷ್ಟಿಸುತ್ತಿರುವ ವರ್ತನೆಗೆ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅವರು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ತಿನ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಹೇಳಿದೆ.
ಲೋಕಸಭೆಯಲ್ಲಿ ಬುಧವಾರ ನಡೆದ ಗದ್ದಲ ಗಲಾಟೆ
ಮುಂಗಾರು ಅಧಿವೇಶನದ ಹಿನ್ನೆಲೆ ಬುಧವಾರ ಲೋಕಸಭೆ ಕಲಾಪ ಆರಂಭದಲ್ಲೇ ಪೆಗಾಸಸ್ ಮತ್ತು ವಿವಾದಿತ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ಶುರು ಮಾಡಿದವು. ಈ ಹಂತರದಲ್ಲಿ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು. ಕಾಗದಗಳನ್ನು ಹರಿಯಿತುವುದು, ನಾಮಫಲಕಗಳನ್ನು ತೋರಿಸುವುದು ಹಾಗೂ ಕುರ್ಚಿಗಳ ಮೇಲೆ ಹರಿದ ಕಾಗದಗಳನ್ನು ಎಸೆಯುವ ದೃಶ್ಯಗಳಿಗೆ ಲೋಕಸಭೆ ಸಾಕ್ಷಿಯಾಯಿತು. ಪ್ರತಿಪಕ್ಷಗಳ ನಡುವಳಿಕೆಯಿಂದ ಗದ್ದಲ-ಗಲಾಟೆ ಹೆಚ್ಚಾಯಿತು.
ಶಿಷ್ಟಾಚಾರ ತೊರೆದು ವರ್ತಿಸಿದ ಪ್ರತಿಪಕ್ಷ ಸದಸ್ಯರು
ಲೋಕಸಭೆ ಬಾವಿಗಿಳಿದ ಪ್ರತಿಪಕ್ಷಗಳ ನಾಯಕರು ಪೆಗಾಸಸ್ ಮತ್ತು ರೈತರ ಪರವಾಗಿ ಘೋಷಣೆಗಳನ್ನು ಕೂಗುವುದಕ್ಕೆ ಆರಂಭಿಸಿದರು. "ಪ್ರತಿಭಟನೆ ನಡೆಸುವುದಕ್ಕೂ ಒಂದು ಮಾರ್ಗವಿದೆ. ಆದರೆ ಇಂದು ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ದೇವಸ್ಥಾನದ ಗೌರವ ಮತ್ತು ಶಿಷ್ಟಾಚಾರಕ್ಕೆ ಧಕ್ಕೆ ಉಂಟು ಮಾಡುವಂತೆ ನಡೆದುಕೊಂಡಿದ್ದಾರೆ," ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ದೂಷಿಸಿದ್ದಾರೆ.
ಈಗಾಗಲೇ ಅಮಾನತುಗೊಂಡಿರುವ ಟಿಎಂಸಿ ಸಂಸದ
ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಸಂತಾನು ಸೇನ್ ಜುಲೈ 23ರಂದೇ ಅಮಾನತುಗೊಂಡಿದ್ದಾರೆ. ಆಗಸ್ಟ್ 13ರವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ದೂರ ಇರುವಂತೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸೂಚನೆ ನೀಡಿದ್ದಾರೆ. ಗುರುವಾರ ರಾಜ್ಯಸಭೆಯಲ್ಲಿ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶ ಪೆಗಾಸಸ್ ಕುರಿತು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡುತ್ತಿದ್ದರು. ಈ ವೇಳೆ ಸಚಿವರ ಕೈಯಲ್ಲಿದ್ದ ಪತ್ರಗಳನ್ನು ಕಸಿದುಕೊಂಡ ಸಂಸದ ಸಂತಾನು ಸೇನ್ ಅದನ್ನು ಹರಿದು ಹಾಕಿದ್ದರು. "ಸದನದಲ್ಲಿ ನಡೆದ ಘಟನೆಗಳ ಬಗ್ಗೆ ನನಗೆ ತುಂಬಾ ನೋವಾಗುತ್ತದೆ. ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರ ಕೈಯಲ್ಲಿರುವ ಪತ್ರಗಳನ್ನು ಕಸಿದು ಹರಿದು ಹಾಕುವಷ್ಟು ಕೆಳಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಇಂಥ ನಡುವಳಿಕೆಯು ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ದಾಳಿ ಆಗಿರುತ್ತದೆ," ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದರು.
ಗದ್ದಲ ಗಲಾಟೆಗೆ ಬಲಿಯಾಗುತ್ತಿರುವ ಕಲಾಪ
ಕಳೆದ ಜುಲೈ 19ರಿಂದ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಬರೀ ಗದ್ದಲ-ಗಲಾಟೆಯೇ ಆಗುತ್ತಿದೆ. ಪೆಗಾಸಸ್ ಬೇಹುಗಾರಿಕೆ ಪ್ರಕರಣ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸದರ ಪ್ರತಿಭಟನೆಯಿಂದಾಗಿ ಈವರೆಗೂ ಒಂದು ಒಂದು ದಿನ ಉಭಯ ಕಲಾಪಗಳಲ್ಲಿ ಆರೋಗ್ಯಕರ ಚರ್ಚೆ ನಡೆದಿಲ್ಲ. ಈ ಮಧ್ಯೆ ಕೆಲವು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಇನ್ನೊಂದು ಕಡೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನಾ ವೈಖರಿ ಹಾಗೆಯೇ ಮುಂದುವರಿದಿದೆ.