ನವದೆಹಲಿ; ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ ಹೊಸದಾಗಿ ಪತ್ತೆಯಾಗಿರುವ ಕೋವಿಡ್ ಸೋಂಕಿನ ರೂಪಾಂತರ ಆಲ್ಫಾ ಮತ್ತು ಡೆಲ್ಟಾ ವಿರುದ್ಧ ಸಹ ಪರಿಣಾಮಕಾರಿ ರಕ್ಷಣೆ ನೀಡುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿ ಮೊದಲು ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಸ್ಪುಟ್ನಿಕ್ ವಿ ಲಸಿಕೆಗಳನ್ನು ವಿವಿಧ ರಾಜ್ಯಗಳಲ್ಲಿ ನೀಡಲಾಗುತ್ತಿದೆ. ಕೊವ್ಯಾಕ್ಸಿನ್ ಯಾವ ರಾಜ್ಯದಲ್ಲಿ ಎಷ್ಟು ಡೋಸ್ ನೀಡಲಾಗಿದೆ ಎಂಬ ಅಂಕಿ ಸಂಖ್ಯೆ ಮಾಹಿತಿ ಸಿಕ್ಕಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶೇ 26ಕ್ಕಿಂತ ಹೆಚ್ಚು ಡೋಸ್ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಅಸ್ಸಾಂ ಮತ್ತು ತ್ರಿಪುರ ಹೊರತುಪಡಿಸಿದರೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಸಿಕ್ಕಿಂ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂ ರಾಜ್ಯಗಳಿಗೆ ಕೊವ್ಯಾಕ್ಸಿನ್ ತಲುಪಿಯೇ ಇಲ್ಲ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ 12 ಮತ್ತು ಪುದುಚೇರಿಯಲ್ಲಿ 72 ಡೋಸ್ ಕೊವ್ಯಾಕ್ಸಿನ್ ನೀಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಲಡಾಕ್‌ಗಳಲ್ಲಿ ಕೊವ್ಯಾಕ್ಸಿನ್ ತಲುಪಿಲ್ಲ.
ಮಹಾರಾಷ್ಟ್ರ ರಾಜ್ಯ ಕೋವಿಡ್ ವಿರುದ್ಧ 3 ಕೋಟಿ ಜನರಿಗೆ ಲಸಿಕೆ ಹಾಕಿದೆ. ಇದರಲ್ಲಿ ಕೊವ್ಯಾಕ್ಸಿನ್ 37,52,758 ಡೋಸ್ ಬಳಕೆಯಾಗಿದೆ. ಗುಜರಾತ್‌ನಲ್ಲಿ 30,53,346 ಡೋಸ್ ಬಳಕೆ ಮಾಡಲಾಗಿದೆ.
ತೆಲಂಗಾಣದಲ್ಲಿ ಶೇ 17.91, ತಮಿಳುನಾಡು 16.94, ಜಾರ್ಖಂಡ್ 16.57, ಆಂಧ್ರ ಪ್ರದೇಶ 15.65, ಗೋವಾದಲ್ಲಿ 2.01, ತ್ರಿಪುರದಲ್ಲಿ 1.4 ಕೇರಳದಲ್ಲಿ ಶೇ 8.69ರಷ್ಟು ಕೊವ್ಯಾಕ್ಸಿನ್ ಬಳಕೆ ಮಾಡಲಾಗಿದೆ.
ಜೂನ್ 30ರ ವರದಿಯಂತೆ 3,61,35,097 ಡೋಸ್ ಕೊವ್ಯಾಕ್ಸಿನ್ ಬಳಕೆಯಾಗಿದೆ. 28,96,05,38 ಡೋಸ್ ಕೋವಿಶೀಲ್ಡ್ ಮತ್ತು 84,605 ಡೋಸ್ ಸ್ಪುಟ್ನಿಕ್ ವಿ ಬಳಕೆ ಮಾಡಲಾಗಿದೆ. ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದ್ದರೂ ದೇಶದಲ್ಲಿ ಬಳಕೆ ಮಾಡಿರುವುದು ಕಡಿಮೆ.
ಭಾರತ ಬಯೋಟೆಕ್ ಜಂಟಿ ನಿರ್ದೇಶಕಿ ಸುಚಿತ್ರಾ ಎಲ್ಲ ಮೇ ತಿಂಗಳಿನಲ್ಲಿ ಹೆಚ್ಚಿನ ಕೊವ್ಯಾಕ್ಸಿನ್ ಉತ್ಪಾದನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹೈದರಾಬಾದ್ ಹೊರತುಪಡಿಸಿ ಬೆಂಗಳೂರು, ಗುಜರಾತ್‌ನಲ್ಲಿಯೂ ಜುಲೈ ಅಂತ್ಯದ ವೇಳೆಗೆ ಲಸಿಕೆ ಉತ್ಪಾದನೆಯಾಗಲಿದೆ.
ತಿಂಗಳಿಗೆ 17 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿಯನ್ನು ಭಾರತ್ ಬಯೋಟೆಕ್ ಹೊಂದಿದೆ. ನವೆಂಬರ್ ವೇಳೆಗೆ ತಿಂಗಳಿಗೆ 135 ಮಿಲಿಯನ್ ಡೋಸ್ ಉತ್ಪಾದನೆಯಾಗುವ ನಿರೀಕ್ಷೆ ಇದೆ.