ನವದೆಹಲಿ: 'ಪೆಗಾಸಸ್' ಗೂಢಚರ್ಯೆಯಲ್ಲಿ ಸರ್ಕಾರದ ಪಾತ್ರವಿದೆಯೇ ಇಲ್ಲವೇ ಎಂಬುದನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ನೀವು ಅವರ ಫೋನ್‌ನಲ್ಲಿ ಏನನ್ನು ಓದುತ್ತಿದ್ದೀರಿ ಎಂದು ಜನರಿಗೆ ಗೊತ್ತಿದೆ' ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಅವರು' ಏನು ಓದುತ್ತಿದ್ದಾರೆಂದು ನಮಗೆ ಗೊತ್ತಿದೆ-ನಿಮ್ಮ ಫೋನ್‌ನಲ್ಲಿ ಎಲ್ಲವೂ ಇದೆ! #ಪೆಗಾಸಸ್' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಜನರು ಏನು ಓದುತ್ತಿದ್ದಾರೆಂದು ಗೊತ್ತಿದೆ ಎಂದು ಉಲ್ಲೇಖಿಸುತ್ತಾ, ಈ ಹಿಂದೆ ತಾವೇ ಮಾಡಿದ್ದ ಟ್ವೀಟ್ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ.
'ನಮ್ಮ ದೂರವಾಣಿಗಳನ್ನು ಕದ್ದಾಲಿಸುತ್ತಿರುವ ಹಾಗೂ ದೂರವಾಣಿಗಳ ಮೇಲೆ ಕಣ್ಗಾವಲಿಟ್ಟಿರುವ ಇಸ್ರೇಲಿ ಕಂಪನಿಗೂ ಮೋದಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಎಂಬುದನ್ನು ಗೃಹ ಸಚಿವರು ಸಂಸತ್ತಿಗೆ ತಿಳಿಸುವುದು ಬಹಳ ಒಳ್ಳೆಯದು. ಇಲ್ಲದಿದ್ದರೆ 'ವಾಟರ್‌ಗೇಟ್' ಪ್ರಕರಣದಲ್ಲಾದಂತೆ, ಈ ಪ್ರಕರಣ ಬಿಜೆಪಿಗೆ ತೀವ್ರ ತೊಂದರೆ ಕೊಟ್ಟು ನೋಯಿಸುತ್ತದೆ' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಪೆಗಾಸಾಸ್ ತಂತ್ರಾಂಶದ ಗೂಢಚಾರಿಕೆಯನ್ನು ಟೀಕಿಸಿರುವ ಸಿಪಿಎಂ, ಇದು ಸರ್ಕಾರದ 'ಅಕ್ರಮ ಬೇಹುಗಾರಿಕೆ'ಯನ್ನು ಬಹಿರಂಗಗೊಳಿಸಿರುವ ಪ್ರಕರಣವಾಗಿದೆ ಎಂದು ಹೇಳಿದೆ.
'ಕೇಂದ್ರ ಸರ್ಕಾರ ದೇಶದ ಹಲವು ನಾಗರಿಕರ ಮೇಲೆ ಕಣ್ಗಾವಲು ಮತ್ತು ಗೂಢಚಾರಿಕೆ ನಡೆಸುತ್ತಿರುವುದು ಈ ಪ್ರಕರಣದಿಂದ ಬಹಿರಂಗವಾಗಿದೆ. ಪೆಗಾಸಸ್ ಸ್ಪೈವೇರ್ನ ಇಸ್ರೇಲಿ ಕಂಪನಿ ಸರಬರಾಜುದಾರ ಎನ್‌ಎಸ್‌ಒ ತನ್ನ ಗ್ರಾಹಕರು ಸರ್ಕಾರಗಳು ಮತ್ತು ಅವರ ಏಜೆನ್ಸಿಗಳು ಮಾತ್ರ ಎಂದು ಹೇಳುತ್ತದೆ. ಇದಕ್ಕೆಲ್ಲಾ ಯಾರು ಕಾರಣ ಎಂದು ಮೋದಿ ಸರ್ಕಾರ ಉತ್ತರಿಸಬೇಕಾಗಿದೆʼ ಸಿಪಿಐ (ಎಂ) ಟ್ವೀಟ್ ಮಾಡಿದೆ.
ಪೆಗಾಸಸ್ ಗೂಡಚಾರಿಕೆ ತಂತ್ರಾಂಶ ಪೂರೈಸಿರುವ ಇಸ್ರೇಲಿ ಕಂಪನಿ ಎನ್‌ಎಸ್‌ಒ ಹೇಳಿರುವ ಪ್ರಕಾರ, 'ಸರ್ಕಾರಗಳು ಮತ್ತು ಸರ್ಕಾರಿ ಸಂಸ್ಥೆಗಳೇ ಆ ಕಂಪನಿಯ ಗ್ರಾಹಕರು. ಈ ಅಕ್ರಮ ಬೇಹುಗಾರಿಕೆಗೆ ಯಾರು ಜವಾಬ್ದಾರಿ ಎಂದು ಮೋದಿ ಸರ್ಕಾರ ಉತ್ತರ ಹೇಳಬೇಕು' ಎಂದು ಸಿಪಿಎಂ ಟ್ವೀಟ್ ಮಾಡಿದೆ.
ಪೆಗಸಾಸ್ ಗೂಢಚರ್ಯೆ ಪ್ರಕರಣ ಸೋಮವಾರದ ಸಂಸತ್ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಆಪ್ ಪಕ್ಷದ ಸಂಸದ ಸಂಜಯ್ ಸಿಂಗ್, ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್ ಮತ್ತು ಸಿಪಿಐ ಬಿನಾಯ್ ವಿಶ್ವಂ ಸೇರಿದಂತೆ ಕೆಲವು ಸಂಸದರು, ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನವನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
'ಪೆಗಾಸಸ್' ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು 40 ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳು ಸೇರಿದಂತೆ 12 ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಿ, ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ವರದಿಯೊಂದು ಪ್ರಕಟವಾಗಿತ್ತು. ಸೋರಿಕೆಯಾದ ಈ ದತ್ತಾಂಶವನ್ನು ಪರಿಶೀಲಿಸಿದಾಗ 300 ಭಾರತೀಯ ಮೊಬೈಲ್ ನಂಬರ್‌ಗಳಿದ್ದವು. ಅದರಲ್ಲಿ ವಿರೋಧ ಪಕ್ಷದ ನಾಯಕರು, ಕಾನೂನು ಕ್ಷೇತ್ರದವರು, ಉದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಹಕ್ಕುಗಳ ಹೋರಾಟಗಾರರು ಮತ್ತಿತರರ ಹೆಸರುಗಳಿದ್ದವು ಎಂದು 'ದಿ ವೈರ್' ಭಾನುವಾರ ವರದಿ ಪ್ರಕಟಿಸಿತ್ತು.