ನವದೆಹಲಿ: ಏರೋಸ್ಪೇಸ್ ಅಪ್ಲಿಕೇಶನ್‌ಗಳಿಗೆ ಸಂಕೀರ್ಣವಾದ ಘಟಕಗಳನ್ನು ತಯಾರಿಸಲು ಬಳಸುವಂತಹ ಅಧಿಕ ಸಾಮರ್ಥ್ಯದ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
'ಸ್ಲ್ಯಾಟ್, ಫ್ಲಾಪ್ ಟ್ರ್ಯಾಕ್‌ಗಳು, ಲ್ಯಾಂಡಿಂಗ್ ಗಿಯರ್ ಮತ್ತು ಲ್ಯಾಂಡಿಂಗ್ ಗಿಯರ್‌ನಲ್ಲಿನ ಡ್ರಾಪ್ ಲಿಂಕ್ ಸೇರಿದಂತೆ ಹಲವು ಘಟಕಗಳನ್ನು ಈ ಮಿಶ್ರಲೋಹದಿಂದ ಮಾಡಬಹುದಾಗಿದೆ' ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಉಕ್ಕುಗಳಿಗೆ ಹೋಲಿಸಿದರೆ ಬೀಟಾ ಟೈಟಾನಿಯಂ ಮಿಶ್ರಲೋಹ ಅತ್ಯುತ್ತಮ ತುಕ್ಕು ನಿರೋಧಕ ಗುಣ ಮತ್ತು ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿದೆ. ದುಬಾರಿ ಬೆಲೆಯ ಲೋಹಗಳ ಬಳಕೆ ತಗ್ಗಿಸಲು ಇದು ಪರಿಣಾಮಕಾರಿಯೂ ಎನಿಸಲಿದ್ದು, ಉತ್ತಮ ವಹಿವಾಟಿಗೂ ದಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಟೈಟಾನಿಯಂ ಜೊತೆಗೆ ವೆನಾಡಿಯಮ್, ಕಬ್ಬಿಣ ಮತ್ತು ಅಲ್ಯೂಮಿನಿಯಂ ಅನ್ನು ಒಳಗೊಂಡಿರುವ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರವಾದ ಸಾಂಪ್ರದಾಯಿಕ ಎನ್‌ಐ-ಸಿಆರ್-ಎಂಒ ರಚನೆಯ ಉಕ್ಕುಗಳಿಗೆ ಪರ್ಯಾಯವಾಗಿ ಬಳಸುತ್ತಿವೆ ಎಂದು ಸಚಿವಾಲಯ ಹೇಳಿದೆ.
ಸಚಿವಾಲಯದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) 15ಕ್ಕೂ ಹೆಚ್ಚು ಉಕ್ಕಿನ ಘಟಕಗಳನ್ನು ಗುರುತಿಸಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಬೀಟಾ ಟೈಟಾನಿಯಂ ಮಿಶ್ರಲೋಹ ತಯಾರಿಕೆಗೆ ಬದಲಾಯಿಸಬಹುದು ಎಂದು ಅದು ತಿಳಿಸಿದೆ.
ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಡಿಆರ್‌ಡಿಒ ಮತ್ತು ಉದ್ಯಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅಭಿನಂದಿಸಿದ್ದಾರೆ.