ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು ಯುವಕರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ನಡುವೆ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೂ ಸಚಿವ ಸ್ಥಾನ ಸಿಗುವ ಊಹಾಪೋಹಗಳಿದ್ದು ಜು.06 ರಂದು ಸಂಜೆ ದೆಹಲಿಗೆ ದಿಢೀರ್ ಭೇಟಿ ನೀಡಿದ್ದಾರೆ. ತಮ್ಮ ದೆಹಲಿ ಭೇಟಿಯ ಬಗ್ಗೆ ಮಾತನಾಡಿರುವ ಸಿಂಧಿಯಾ, "ನಾನು ಉಜ್ಜೈನ್ ಗೆ ಹೋಗಿದ್ದೆ. ಉಜ್ಜೈನ್ ಭೇಟಿ ಪೂರ್ಣಗೊಳಿಸಿದ ಬೆನ್ನಲ್ಲೇ ನಾನು ದೆಹಲಿಗೆ ತೆರಳುತ್ತಿದ್ದೇನೆ" ಎಂದು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜುಲೈ 8 ರಂದು ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆ ನಡೆಸಿದ ಬಳಿಕ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಸುಳಿವು ದೊರೆತಿತ್ತು.
2020 ರ ಮಾರ್ಚ್ ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸಿಂಧಿಯಾ ಬಿಜೆಪಿ ಸೇರಿದ್ದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ನ 22 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನಗೊಂಡಿತ್ತು.
ಯುಪಿಎ-1 ರಲ್ಲಿ ಸಿಂಧಿಯಾ ಐಟಿ ಹಾಗೂ ಸಂವಹನ ಖಾತೆಯ ರಾಜ್ಯಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಯುಪಿಎ-2 ಅವಧಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಖಾತೆ ಸಚಿವರಾಗಿದ್ದ ಅನುಭವ ಹೊಂದಿದ್ದಾರೆ.