ನವದೆಹಲಿ : ಸಂಸದೀಯ ಸಮಿತಿಯ ಸದಸ್ಯರನ್ನೊಳಗೊಂಡ ವಿಮಾನವೊಂದನ್ನು ಸಂಸದರೇ ಪೈಲೆಟ್ ಆಗಿ ಹಾರಿಸಿಕೊಂಡು ಹೋದ ಪ್ರಸಂಗವೊಂದು ಇತ್ತೀಚೆಗೆ ನಡೆದಿದೆ. ಬಿಹಾರದ ಸರಣ್ ಕ್ಷೇತ್ರದ ಸಂಸದ ಹಾಗೂ ಕಮರ್ಷಿಯಲ್ ಪೈಲೆಟ್ ಆಗಿರುವ ರಾಜೀವ್ ಪ್ರತಾಪ್ ರೂಡಿ ಅವರು ತಮ್ಮ ಈ 'ಸ್ಮರಣೀಯ' ಯಾತ್ರೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಏರ್ಬಸ್ 320-321 ಅನ್ನು ಚಲಾಯಿಸುವ ಪೈಲೆಟ್ ಸಹ ಆಗಿರುವ ಸಂಸದೀಯ ಸಮಿತಿ ಸದಸ್ಯ ಹಾಗೂ ಸಂಸದ ರೂಡಿ ಅವರು, ಇತ್ತೀಚೆಗೆ ಹಿರಿಯ ಬಿಜೆಪಿ ನಾಯಕರು ಮತ್ತು ಸಂಸದೀಯ ಸಮಿತಿಯ ಸದಸ್ಯರನ್ನು ಪ್ರಯಾಣಿಕರಾಗಿ ಹೊಂದಿದ್ದ ವಿಮಾನ ಯಾತ್ರೆಯ ಬಗೆಗಿನ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ತಾವು ಪೈಲೆಟ್ ಆಗಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗಣ್ಯರನ್ನು ಅವರು ಸ್ವಾಗತಿಸಿ, ಆಡಿದ ಮಾತುಗಳು ದಾಖಲಾಗಿವೆ.
'ಭಾರತೀಯ ಸಂಸತ್ತಿನ ಇತಿಹಾಸದಲ್ಲಿ, ಪ್ರಾಯಶಃ ಮೊದಲನೇ ಬಾರಿಗೆ ಸಂಸತ್ತಿನ ಸ್ಥಾಯಿ ಸಮಿತಿಯನ್ನು ಸಂಸದರೊಬ್ಬರು ವಿಮಾನದಲ್ಲಿ ಹಾರಿಸಿಕೊಂಡು ಹೋಗುತ್ತಿದ್ದಾರೆ' ಎಂದಿರುವ ರೂಡಿ ಮಾತಿಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿದ್ದಾರೆ. ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನದ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂಸದ ಟಿ.ಜಿ.ವೆಂಕಟೇಶ್, ಸದಸ್ಯರಾದ ಬಿಹಾರದ ಮಾಜಿ ಸಿಎಂ ಸುಶೀಲ್ ಕುಮಾರ್ ಮೋದಿ ಮತ್ತು ಉತ್ತರಾಖಂಡದ ಮಾಜಿ ಸಿಎಂ ತೀರಥ್ ಸಿಂಗ್ ರಾವತ್, ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರುಗಳ ಹೆಸರು ಹೇಳಿ ಅವರನ್ನು ವಿಮಾನಕ್ಕೆ ಸ್ವಾಗತಿಸಿದ್ದಾರೆ.
ನಂತರ ತಮ್ಮ ಕೋ-ಪೈಲೆಟ್ ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಪ್ರಯಾಣಿಕರಿಗೆ ಪರಿಚಯಿಸಿದ ಸಂಸದ ರೂಡಿ, ತಮ್ಮ ವಿಮಾನದ ಅತ್ಯಂತ ಕಿರಿಯ ಪ್ರಯಾಣಿಕಳೆಂದರೆ ಮನೋಜ್ ತಿವಾರಿ ಅವರ 6 ತಿಂಗಳ ಮಗಳು ಸಾನ್ವಿಕ ಎಂದು ಆಕೆಯ ಮೊದಲ ವಿಮಾನಯಾನಕ್ಕಾಗಿ ಚಪ್ಪಾಳೆ ತಟ್ಟಿಸಿ ಶುಭ ಕೋರಿದ ನಂತರ ಕಾಕ್ಪಿಟ್ಗೆ ಹಿಂತಿರುಗಿದ್ದಾರೆ.