ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಯ ಯಶಸ್ಸಿಗೆ ಕಾಸರಗೋಡು ಜಿಲ್ಲೆಯ ಒಗ್ಗಟ್ಟು ಕಾರಣವಾಗಿದೆ.
ೀವಿಡ್ ಎಂಬ ಮಹಾಮಾರಿ ವ್ಯಾಪಿಸಿದ ವೇಳೆ ಎಲ್ಲ ವಲಯಗಳೂ ಸ್ಥಗಿತಗೊಂಡು ಜನಜೀವನ ಕಂಗೆಟ್ಟ ಸಂದರ್ಭ ಸುಭದ್ರ ಭವಿಷ್ಯತ್ತಿನ ಉದ್ದೇಶದಿಂದ ರಾಜ್ಯ ಸರಕಾರ ರಚಿಸಿದ್ದ ಯೋಜನೆಯೇ ಸುಭಿಕ್ಷ ಕೇರಳಂ. ಎಲ್ಲ ವಲಯಗಳ ಜನತೆಯನ್ನು ಕೃಷಿಯತ್ತ ಸೆಳೆದು ಆ ಮೂಲಕ ಆಹಾರ ಸುರಕ್ಷೆ ಖಚಿತಪಡಿಸುವ ಲಕ್ಷ್ಯದೊಂದಿಗೆ ಈ ಯೋಜನೆ ಜಾರಿಗೊಂಡಿದೆ. ಬಂಜರು ಜಾಗವನ್ನು ವೈಜ್ಞಾನಿಕವಾಗಿ ಹಸನುಗೊಳಿಸಿ ಕೃಷಿ ನಡೆಸುವ ಸಹಿತ ಅನೇಕ ಕ್ರಿಯಾಯೋಜನೆ ಇಲ್ಲಿ ಅಳವಡಗೊಂಡಿದೆ. ಇಡೀ ರಾಜ್ಯದಲ್ಲೇ ಅತ್ಯಧಿಕ ಬಂಜರು ಜಾಗವಿರುವ ಜಿಲ್ಲೆ ಕಾಸರಗೋಡು ಎಂದು ಘೊಷಿಸಲಾಗಿದ್ದು, ಈ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಠಾನಗೊಂಡು ಅತ್ಯಂತ ಯಶಸ್ವಿಯಾಗಿದೆ.
ರಾಜ್ಯ ಮಟ್ಟದಲ್ಲಿ ಈ ಯೋಜನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿದ ತಕ್ಷಣವೇ ಸ್ವತಃ ಕೃಷಿವಿಜ್ಞಾನಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಈ ಯೋಜನೆ ಜಾರಿ ಸಂಬಂಧ ಕ್ರಮ ಕೈಗೊಳ್ಳಲಾಗಿತ್ತು.
ಮೊದಲ ಹಂತದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಲಾಗಿತ್ತು."ನೂತನ ಭೂಮಿ-ನೂತನ ಕೃಷಿಕರು" ಎಂಬ ಸಂದೇಶದೊಂದಿಗೆ ಜಿಲ್ಲಾಧಿಕಾರಿ ಈ ಸಭೆಯಲ್ಲಿ ಸಾರಿ ಕೃಷಿ ವಲಯದಲ್ಲಿ ನೂತನ ಆಶಯವನ್ನು ಸಾರಿದ್ದರು. ಕೋವಿಡ್ ಅವಧಿಯಲ್ಲಿ ನೌಕರಿ ಕಳೆದುಕೊಂಡವರು, ವಿದೇಶಗಳಿಂದ ಊರಿಗೆ ಮರಳಿದವರು ಸಹಿತ ಎಲ್ಲರನ್ನೂ ಕೃಷಿಯತ್ತ ಆಕರ್ಷಿಸುವಂತೆ ಮಾಡುವ ಯತ್ನ ಆರಂಭಗೊಂಡಿತ್ತು. ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಹಾಲು ಉತ್ಪಾದನೆ ಸಹಿತ ಎಲ್ಲ ವಲಯಗಳಲ್ಲೂ ವಿಶಿಷ್ಟ ರೀತಿಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯಾಡಳಿತ ಸಂಸ್ಥೆಗಳ, ಸಹಕಾರಿ ಬ್ಯಾಂಕ್ ಗಳ, ಇನ್ನಿತರ ಸರಕಾರಿ ಇಲಾಖೆಗಳ, ಜನಪರ ಒಕ್ಕೂಟಗಳ ಚಟುವಟಿಕೆಗಳು ಸುಭಿಕ್ಷ ಕೇರಳಂ ಯೋಜನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಸುಭದ್ರಗೊಳಿಸಿತು.
ಯೋಜನೆಯ ಚಟುವಟಿಕೆಗಳನ್ನು ನಿಖರವಾಗಿ ಮಾನಿಟರಿಂಗ್ ನಡೆಸಲು ಜಿಲ್ಲಾ ಮಟ್ಟದಲ್ಲಿ ಕೋರ್ ಸಮಿತಿ ರಚಿಸಿ ಕಾರ್ಯಪ್ರವೃತ್ತರಾದುದು ಇತರ ಜಿಲ್ಲೆಗಳ ಕ್ರಮಗಳಿಗಿಂತ ಭಿನ್ನವಾಗಿತ್ತು. ಈ ಕೋರ್ ಸಮಿತಿ ತದನಂತರ ಈ ವರೆಗೆ ಸತತ 27 ಬಾರಿ ಸಭೆ ಸೇರಿ ವಿಚಾರವಿನಿಮಯ ನಡೆಸಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿ ಯೋಜನೆ ಜಾರಿಯಲ್ಲಿನ ಅಡೆ-ತಡೆ, ಬಂಜರು ಜಾಗದ ಪತ್ತೆ, ಉತ್ಪನ್ನಗಳಿಗೆ ಮಾರುಕಟ್ಟೆಗಳ ಪತ್ತೆ ಇತ್ಯಾದಿ ವಿಷಯಗಳಲ್ಲಿ ಮಾತುಕತೆ ನಡೆಸಿ ಪರಿಹಾರ ಜಾರಿಗೊಳಿಸಿತ್ತು.
ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಸಹಕಾರಿ, ನೀರಾವರಿ, ಮಣ್ಣು ಸಂರಕ್ಷಣೆ ಇಲಾಖೆಗಳು, ಕೃಷಿ ಕಾಲೇಜು, ನೌಕರಿ ಖಾತರಿ ಯೋಜನೆ, ಹರಿತ ಕೇರಳಂ ಮಿಷನ್ ಸಹಿತ ಸರಕಾರಿ ವ್ಯವಸ್ಥೆಗಳ ಜೊತೆ ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರದ ಸಹಾಯವನ್ನೂ ಇಲ್ಲಿ ಬಳಸಲಾಗಿದೆ. ಇಂಥಾ ಒಕ್ಕೂಟದ ಯತ್ನ ಕಾಸರಗೋಡು ಜಿಲ್ಲೆಯಲ್ಲಿ ಈ ಹಿಂದೆ ನಡೆದಿರಲಿಲ್ಲ.ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳು, ವಿದ್ಯಾರ್ಥಿಗಳು ಹೀಗೆ ಎಲ್ಲ ವಲಯಗಳೂ ಸೇರಿದ ಪರಿಣಾಮ ಜನಪರ ಮಟ್ಟವೂ ಬಲಗೊಂಡಿತ್ತು.
ನೂತನ ತಂತ್ರಜ್ಞಾನದ ಬಳಕೆಯೊಂದಿಗೆ ಯೋಜನೆಯ ಅನುಷ್ಠಾನ ತ್ವರಿತಗತಿಯನ್ನು ಕಂಡಿತ್ತು. ಬಂಜರು ಜಾಗದ ಮಾಹಿತಿ ಅಪ್ ಲೋಡ್ ನಡೆಸಲು ಆಪ್, ಹರಿತ ಕೇರಳಂ ಮಿಷನ್ ನ ಹರಿತ ಸಮೃದ್ಧಿ ಆಪ್, ಆನ್ ಲೈನ್ ಮಾರ್ಕೆಟಿಂಗ್ ಸಹಿತ ಅನೇಕ ತಂತ್ರಜ್ಞಾನ ವ್ಯವಸ್ಥೆಗಳನ್ನೂ ಬಳಸಲಾಗಿದೆ.
ರಖಂ ಮಾರುಕಟ್ಟೆ ಎಂಬ ವಿನೂತನ ಆಶಯ ಇದೀಗ ಜಾರಿಗೊಳಿಸಲಾಗುತ್ತಿದೆ. ಕಾಸರಗೋಡಿನ ಗಿಡ್ಡ ಹಸು ತಳಿಯ ಸಂವರ್ಧನೆ ಸಂಬಂಧ ಸೆಂಟ್ರಲ್ ಗೋವಾಸ್ಥ ಯೋಜನೆಯ ಸಹಾಯಕ್ಕಾಗಿ ಯೋಜನೆ ಸಿದ್ಧಪಡಿಸಿ ಈಗಾಗಲೇ ಸಲ್ಲಿಸಲಾಗಿದೆ. ಫಾರ್ಮರ್ಸ್ ಪೆÇ್ರಡ್ಯೂಸಿಂಗ್ ಕಂಪನಿ ಆರಂಭಿಸುವ ಯತ್ನವೂ ನಡೆದುಬರುತ್ತಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ದೃಷ್ಟಿಕೋನ, ಮೇಲ್ನೋಟ, ಏಕೀಕರಣ ಇತ್ಯಾದಿಗಳು ಸುಭಿಕ್ಷ ಕೇರಳಂ ಯೋಜನೆಗೆ ವೇಗ ತಂದಿದೆ. ಇವೆಲ್ಲದರ ಪರಿಣಾಮ ಯೋಜನೆಯ ಜಾರಿಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾಸರಗೋಡು ಜಿಲ್ಲೆ ತಲೆ ಎತ್ತಿ ನಿಂತಿದೆ ಎಂದು ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟಿದ್ದಾರೆ.