ತಿರುವನಂತಪುರ: ರಾಜ್ಯದಲ್ಲಿ ಪರೀಕ್ಷಾ ಸಕಾರಾತ್ಮಕತೆ ಕಡಿಮೆಯಾಗದಿರುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ನಿಯಂತ್ರಣವನ್ನು ಬಿಗಿಗೊಳಿಸಿದೆ. ಹೆಚ್ಚಿನ ಟಿಪಿಆರ್ ಹೊಂದಿರುವ ಆರು ಜಿಲ್ಲೆಗಳಲ್ಲಿ ರೋಗ ಹರಡುವುದನ್ನು ಕಡಿಮೆ ಮಾಡಲು ನಿಯಂತ್ರಣಗಳನ್ನು ಬಿಗಿಗೊಳಿಸಲಾಗಿದೆ. ತಪಾಸಣೆ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಮನೆಗಳಲ್ಲಿ ಸಂಪರ್ಕತಡೆಯನ್ನು ಹೊಂದಿರದವರನ್ನು ವಿಶೇಷ ಕೇಂದ್ರಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.
ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಟಿಪಿಆರ್ ದರ ಅತೀ ಹೆಚ್ಚಿದ್ದು, ಅನಿಯಂತ್ರಿತ ಸೋಂಕು ಪ್ರಸರಣ ಮುಂದುವರಿದಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉತ್ತರ ಕೇರಳದ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಲಾಗಿದೆ. ಕೇಂದ್ರ ತಂಡದ ಭೇಟಿಯ ಬಳಿಕ ಈ ನಿರ್ಧಾರಗಳನ್ನು ಜಾರಿಗೆ ತರಲಾಗುವುದು. ಕೇರಳದ ಪರಿಸ್ಥಿತಿ ಜಟಿಲವಾಗಿದೆ ಎಂದು ಸಭೆ ಅಂದಾಜಿಸಿದೆ.
ಹೆಚ್ಚಿನ ಟಿಪಿಆರ್ ಹೊಂದಿರುವ ಎಲ್ಲಾ ಜಿಲ್ಲೆಗಳು ಪರೀಕ್ಷಾ ಗುರಿಯನ್ನು ಸಾಧಿಸಿವೆ. ಆದಾಗ್ಯೂ, ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಗರಿಷ್ಠಗೊಳಿಸಲು ಸೂ|ಚಿಸಲಾಗಿದೆ. ಸಂಪರ್ಕತಡೆ ಬಲಗೊಳಿಸಲೂ ನಿರ್ದೇಶಿಸಲಾಗಿದೆ. ತಪಾಸಣೆ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಲಿದ್ದಾರೆ. ಕೊಮೊರ್ಬಿಡಿಟಿ ಇರುವವರನ್ನು ಕೊರೋನಾ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು. ಇದೇ ವೇಳೆ, ಜಾಗೃತಿ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿರುವರು.