ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಹಲವು ದೇಶಗಳಲ್ಲಿ ಲಸಿಕೆಗಳು ಅಭಿವೃದ್ಧಿಯಾಗುತ್ತಿವೆ. ಕೊರೊನಾ ರೂಪಾಂತರಗಳ ವಿರುದ್ಧ ಈಗಿರುವ ಪ್ರಸ್ತುತ ಲಸಿಕೆಗಳು ಕಾರ್ಯನಿರ್ವಹಿಸುತ್ತವೆಯೇ ಎಂಬ ಕುರಿತು ಹಲವು ಅಧ್ಯಯನಗಳು ನಡೆಯುತ್ತಿವೆ.
ಇಂಥದ್ದೇ ಒಂದು ಅಧ್ಯಯನದಲ್ಲಿ, ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಕುರಿತು ತಜ್ಞರು ಹೊಸ ವಿಷಯವೊಂದನ್ನು ಪ್ರಸ್ತುತಪಡಿಸಿದ್ದಾರೆ. ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಲಸಿಕೆಯು ಜೀವಿತಾವಧಿಯುದ್ದಕ್ಕೂ ರಕ್ಷಣೆ ಒದಗಿಸಬಲ್ಲದು ಎಂಬ ಅಂಶವನ್ನು ಅಧ್ಯಯನ ಸಾಬೀತುಪಡಿಸಿರುವುದಾಗಿ ತಿಳಿಸಿದ್ದಾರೆ.
ಕೊರೊನಾ ಸೋಂಕನ್ನು ಬಗ್ಗಿಬಡಿಸುವ ಲಸಿಕೆ
ಆಸ್ಟ್ರಾಜೆನೆಕಾದ ಈ ಲಸಿಕೆ ಕೊರೊನಾ ಸೋಂಕನ್ನು ಬಗ್ಗುಬಡಿಸಬಲ್ಲ ಪ್ರತಿಕಾಯಗಳನ್ನು ದೇಹದಲ್ಲಿ ಸೃಷ್ಟಿಮಾಡುವುದಷ್ಟೇ ಅಲ್ಲದೆ ಕೊರೊನಾ ರೂಪಾಂತರಗಳ ವಿರುದ್ಧವೂ ಹೋರಾಡಬಲ್ಲ "ಟಿ ಸೆಲ್- T lymphocyte (ಬಿಳಿ ರಕ್ತ ಕಣ)" ಗಳ ಉತ್ಪತ್ತಿಗೆ ಪೂರಕವಾಗಿದೆ. ಸೋಂಕಿನ ಕಣಗಳನ್ನು ಹುಡುಕಿ ನಾಶಮಾಡಲು ದೇಹವನ್ನು ಇದು ಅಣಿಗೊಣಿಸಬಲ್ಲದು ಎಂದು ಬ್ರಿಟನ್‌ನಲ್ಲಿನ "ದಿ ಸನ್"ನಲ್ಲಿ ವರದಿ ಮಾಡಲಾಗಿದೆ.
ಪ್ರತಿಕಾಯ ಕ್ಷೀಣಿಸಿದರೂ ಸೋಂಕಿನಿಂದ ರಕ್ಷಣೆ ಇರುತ್ತದೆ
ದೇಹದಲ್ಲಿ ಪ್ರತಿಕಾಯಗಳು/ ರೋಗನಿರೋಧಕ ಶಕ್ತಿ ಕ್ಷೀಣಿಸಿದ ನಂತರವೂ ಟಿ-ಸೆಲ್ ಸೃಷ್ಟಿ ಮುಂದುವರೆಯಬಲ್ಲದಾಗಿದೆ. ಇದರ ಪರಿಣಾಮ ಜೀವಮಾನದುದ್ದಕ್ಕೂ ಉಳಿಯುತ್ತದೆ ಎಂದು ತಿಳಿಸಿದ್ದಾರೆ.
ಆಕ್ಸ್‌ಫರ್ಡ್, ಬ್ರಿಟನ್, ಸ್ವಿಡ್ಜರ್ಲೆಂಡ್‌ನ ವಿಜ್ಞಾನಿಗಳು "ನೇಚರ್" ಎಂಬ ನಿಯತಕಾಲಿಕೆಯಲ್ಲಿ ತಮ್ಮ ಅಧ್ಯಯನ ಪ್ರಕಟಿಸಿದ್ದು, ಅದರಲ್ಲಿ, ಸೋಂಕಿನ ವಿರುದ್ಧ ಹೋರಾಡಬಲ್ಲ "ಟಿ ಸೆಲ್" ರಕ್ಷಣೆ ಆಕ್ಸ್‌ಫರ್ಡ್ ಲಸಿಕೆಯ ಪ್ರಮುಖ ಲಕ್ಷಣ ಎಂದು ಹೇಳಿದ್ದಾರೆ.
ದೀರ್ಘಕಾಲದವರೆಗೂ ಉಳಿಯುವ "ಟಿ ಸೆಲ್"
"ಈ 'ಟಿ ಕೋಶ'ಗಳು ದೇಹದಲ್ಲಿ ಉತ್ತಮ ಪ್ರತಿಕಾಯ ಸೃಷ್ಟಿಗೆ ಕಾರಣವಾಗುತ್ತವೆ. ಸೋಂಕು ತಡೆಯುವಲ್ಲಿ ಇವು ಪ್ರಮುಖ ಪಾತ್ರ ವಹಿಸಿವೆ. ದೇಹ ದೃಢತೆ ಕಾಯ್ದುಕೊಳ್ಳಲು ನೆರವಾಗಲಿದೆ" ಎಂದು ಸ್ವಿಡ್ಜರ್ಲೆಂಡ್‌ನ ಕ್ಯಾಂಟೊನಾಲ್ ಆಸ್ಪತ್ರೆಯ ಸಂಶೋಧಕ ಬರ್ಕಾರ್ಡ್ ಲ್ಯೂಡ್‌ವಿಗ್ ತಿಳಿಸಿದ್ದಾರೆ.
ಟಿ ಸೆಲ್ ಮಟ್ಟವನ್ನು ಅಳೆಯುವುದು ಕಷ್ಟ. ಆದರೆ ಈ ಹೊಸ ಅಧ್ಯಯನದಲ್ಲಿ, ಟಿ ಸೆಲ್ ದೀರ್ಘಕಾಲದವರೆಗೂ ಉಳಿಯುವ ಭರವಸೆ ದೊರೆತಿದೆ. ಈ ಅಧ್ಯಯನ ನಮಗೆ ಲಸಿಕಾ ಪ್ರಕ್ರಿಯೆಯ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ನೆರವಾಗಿವೆ ಎಂದು ತಿಳಿಸಿದ್ದಾರೆ.
ಸೋಂಕಿನ ವಿರುದ್ಧ 60% ಪರಿಣಾಮಕಾರಿ
ಆಸ್ಟ್ರಾಜೆನಾಕಾ ಲಸಿಕೆಯು ಡೆಲ್ಟಾ ರೂಪಾಂತರಿ ವಿರುದ್ಧ ಶೇ.60ರಷ್ಟು ಪರಿಣಾಮಕಾರಿ ಎಂದು ಈ ಹಿಂದೆ ಖ್ಯಾತ ಆರೋಗ್ಯ ತಜ್ಞ ಎರಿಕ್ ತಿಳಿಸಿದ್ದಾರೆ. "ಡೆಲ್ಟಾ ರೂಪಾಂತರಿ ವಿರುದ್ಧ ಆಸ್ಟ್ರಾಜೆನೆಕಾ ಶೇ.60ರಷ್ಟು ಪರಿಣಾಮಕಾರಿ. ಈ ಲಸಿಕೆಯ ಒಂದು ಡೋಸ್ ಶೇ.33ರಷ್ಟು ಪರಿಣಾಮಕಾರಿಯಾಗಿದೆ. ಆದರೆ ಅನೇಕ ದೇಶಗಳಲ್ಲಿ ಕೇವಲ 1 ಡೋಸ್‌ಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಆಸ್ಟ್ರಾಜೆನೆಕಾ ಸಹಯೋಗದಲ್ಲಿ "ಕೋವಿಶೀಲ್ಡ್" ಹೆಸರಿನ ಲಸಿಕೆ ತಯಾರಿಸುತ್ತಿದೆ. ಭಾರತವು ಅನುಮೋದನೆ ನೀಡಿರುವ ಮೂರು ಲಸಿಕೆಗಳಲ್ಲಿ ಇದೂ ಒಂದಾಗಿದೆ.