ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳಿಗೆ ಆಹಾರ ಒದಗಿಸುವ ಪಡಿತರ ಕೇಂದ್ರದಲ್ಲಿ ಪ್ರಧಾನಿ ಮೋದಿಯ ಚಿತ್ರ ಮತ್ತು ಆಯಾ ರಾಜ್ಯದ ಮುಖ್ಯಮಂತ್ರಿ ಚಿತ್ರದ ಜೊತೆಗೆ ಪಕ್ಷದ ಚಿಹ್ನೆಯಾದ ಕಮಲದ ಚಿತ್ರವಿರುವ ಬ್ಯಾನರ್ ಅಳವಡಿಸುವಂತೆ ಬಿಜೆಪಿ ಆಡಳಿತದ ರಾಜ್ಯಗಳಿಗೆ ಬಿಜೆಪಿ ಪಕ್ಷ ಸೂಚಿಸಿರುವುದಾಗಿ ವರದಿಯಾಗಿದೆ.
ಕೊರೋನ ಬಿಕ್ಕಟ್ಟಿನ ಸಂದರ್ಭ ಬಡಜನತೆಗೆ ನೆರವಾಗಲು ಪ್ರಧಾನಮಂತ್ರಿ ಅನ್ನಯೋಜನೆಯನ್ನು ಈ ವರ್ಷದ ಜೂನ್ ವರೆಗೆ ಮತ್ತೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯಡಿ ದೇಶದಾದ್ಯಂತ 80 ಕೋಟಿ ಫಲಾನುಭವಿಗಳಿಗೆ, ಪ್ರತೀ ವ್ಯಕ್ತಿಗೆ 5 ಕಿ.ಗ್ರಾಂನಂತೆ ಆಹಾರ ಧಾನ್ಯ ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ಆಡಳಿತದ ರಾಜ್ಯಗಳಿಗೆ ಸೂಚನೆ ರವಾನಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಆಹಾರ ಯೋಜನೆಯ ಜೊತೆಗೆ ಪಕ್ಷದ ಬ್ಯಾನರ್ ಅಳವಡಿಸುವಂತೆ ಸೂಚಿಸಿದ್ದಾರೆ.
ಈ ಬ್ಯಾನರ್ ನ ಮಾದರಿಯನ್ನು ಬಿಜೆಪಿಯ ದಿಲ್ಲಿ ಕಚೇರಿ ವಿನ್ಯಾಸಗೊಳಿಸಿದ್ದು ಇದನ್ನು ರಾಜ್ಯದ ಘಟಕಗಳಿಗೆ ರವಾನಿಸಲಾಗಿದೆ. ಪಡಿತರ ನೀಡುವ ಬ್ಯಾಗ್ ಗಳಲ್ಲಿ ಕಮಲದ ಚಿಹ್ನೆ ಇರಬೇಕು ಎಂದೂ ಸೂಚಿಸಲಾಗಿದೆ.
ಇದನ್ನು ತಪ್ಪದೆ ಅನುಸರಿಸಬೇಕು ಮತ್ತು ಈ ಉಪಕ್ರಮದ ಬಗ್ಗೆ ಆಯಾ ರಾಜ್ಯದ ಶಾಸಕರು, ಸಂಸದರು ನಿಗಾ ವಹಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಬಿಜೆಪಿ ಆಡಳಿತ ಇರದ ರಾಜ್ಯಗಳಲ್ಲೂ ಪಡಿತರ ಒದಗಿಸುವ ಬ್ಯಾಗ್ ಗಳಲ್ಲಿ ಕಮಲದ ಚಿಹ್ನೆ ಕಡ್ಡಾಯವಾಗಿದೆ. ಈ ರಾಜ್ಯಗಳು ಪ್ರದರ್ಶಿಸುವ ಬ್ಯಾನರ್ನಲ್ಲಿ ಆಯಾ ರಾಜ್ಯದ ಮುಖ್ಯಮಂತ್ರಿಯ ಫೋಟೋದ ಜಾಗದಲ್ಲಿ ಪಕ್ಷದ ಸಂಸದರು ಅಥವಾ ಶಾಸಕರ ಫೋಟೋ ಹಾಕುವಂತೆ ಸೂಚಿಸಲಾಗಿದೆ.
ಕೊರೋನ ಸೋಂಕಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು, ಪಡಿತರ ಬ್ಯಾಗ್ ಗಳು ಪ್ಲಾಸ್ಟಿಕ್ ಮುಕ್ತವಾಗಿರಬೇಕು, ಪಕ್ಷದ ಮುಖಂಡರು ಫಲಾನುಭವಿಗಳನ್ನು ಭೇಟಿ ಮಾಡಬೇಕು ಮತ್ತು ಸಾಮಾಜಿಕ ಮಾಧ್ಯಮದಲ್ಲೂ ಈ ಬಗ್ಗೆ ಪ್ರಚಾರ ಮಾಡಬೇಕು ಎಂದು ಸೂಚಿಸಲಾಗಿದೆ. ಪ್ರಸಕ್ತ, ಕೋವಿಡ್ ಲಸಿಕಾ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿಯ ಫೋಟೋ ಇದೆ. ಈ ಬಗ್ಗೆ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.