ಮಂಜೇಶ್ವರ: ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಿಂದ ಮಂಗಳೂರಿನ ಶೈಕ್ಷಣಿಕ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೇರಳ ಸಾರಿಗೆ ನಿಗಮದಿಂದ ಉಚಿತ ಪ್ರಯಾಣವನ್ನು ಒದಗಿಸುವಂತೆ ಮಂಜೇಶ್ವರ ಕ್ಷೇತ್ರದ ಶಾಸಕ ಎ ಕೆ ಎಂ ಅಶ್ರಫ್ ಸಾರಿಗೆ ಸಚಿವ ಆಂಟನಿ ರಾಜುರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉನ್ನತ ವ್ಯಾಸಂಗಕ್ಕಾಗಿ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಮಂಗಳೂರಿನ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸುತ್ತಿದ್ದು, ಮಂಜೇಶ್ವರ ಕ್ಷೇತ್ರ ಸೇರಿದಂತೆ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳನ್ನು ಭಾಷಾ ಅಲ್ಪಸಂಖ್ಯಾತ ವಿಭಾಗವಾಗಿ ಪರಿಗಣಿಸಿ ಕರ್ನಾಟಕ ಸಾರಿಗೆ ನಿಗಮ ಉಚಿತ ಪ್ರಯಾಣವನ್ನು ಈ ಪ್ರದೇಶದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.ಸುಸಜ್ಜಿತ ಶಿಕ್ಷಣ ಸಂಸ್ಥೆಗಳಿಂದ ವಂಚಿತರಾಗಿ ಮಂಗಳೂರಿನ ವಿದ್ಯಾಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಇದು ಸದುಪಯೋಗವೇ ಸರಿ.ಆದರೆ ಶಿಕ್ಷಣ ಕೇಂದ್ರಗಳಿಗೆ ತೆರಳುವ ವೇಳೆ ಹಾಗೂ ಹಿಂದಿರುಗುವ ಸಮಯದಲ್ಲಿ ಹೆಚ್ಚಾಗಿ ಕೇರಳ ಸರಕಾರಿ ನಿಗಮದ ಬಸ್ಸುಗಳು ಇರುವುದರಿಂದ ವಿದ್ಯಾರ್ಥಿಗಳು ಉಚಿತ ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ.ನೆರೆಯ ರಾಜ್ಯ ನಮ್ಮ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣವನ್ನು ನೀಡುತ್ತಿರುವ ವೇಳೆ ನಮ್ಮ ಸರಕಾರ ವಿದ್ಯಾರ್ಥಿಗಳಿಗೆ ರಿಯಾಯಿತಿಯನ್ನು ನೀಡದಿರುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಬಸ್ ಪ್ರಯಾಣಕ್ಕಾಗಿ ಉಚಿತ ಪಾಸ್ ಒದಗಿಸಲು ಕ್ರಮಕೈಗೊಳ್ಳುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದು, ಶೈಕ್ಷಣಿಕ ಪ್ರಗತಿಗಾಗಿ ಜನಪ್ರತಿನಿಧಿ ಎಂಬ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರುವುದು ನನ್ನ ಕರ್ತವ್ಯ.ಆದುದರಿಂದ ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕಾಗಿ ಕ್ರಮ ಕೈಗೊಳ್ಳುವಂತೆ ಮಾನ್ಯ ಶಾಸಕರು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.