ಕಾಸರಗೋಡು: ಸಮಾಜದ ಅಭಿವೃದ್ಧಿಗೆ ನಾವು ಅಡ್ಡಿಯಾಗುವುದಿಲ್ಲ ಎಂದು ಕಾಸರಗೋಡಿನ ದೇವಾಲಯವೊಂದರ ಅಧಿಕಾರಿಗಳು ಗಮನ ಸೆಳೆದಿದ್ದಾರೆ.
ಚೆರ್ವತ್ತೂರು ಕೋಪ್ಪಲ್ ಅಝಿವತುಕ್ಕಲ್ ಶ್ರೀವಿಷ್ಣುಮೂರ್ತಿ ದೇವಾಲಯ ಸಮಿತಿಯು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಭೂಮಿಯನ್ನು ನೀಡುವ ಮೂಲಕ ದೇವಾಲಯದ ಗತಿಯನ್ನೇ ಬದಲಾಯಿಸಿದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಾಗಿ ದೇವಾಲಯದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ದೇವರು ಅವರನ್ನು ಕ್ಷಮಿಸುತ್ತಾನೆ ಎಂದು ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಆದರೆ ಈ ತೀರ್ಪಿಗಿಂತಲೂ ಮೊದಲೇ ಇಲ್ಲಿಯ ದೇವಾಲಯ ಆಡಳಿತ ಸಮಿತಿ ಈ ಅನುಕರಣೀಯ ಕ್ರಮವನ್ನು ಕೈಗೊಂಡಿದ್ದರು ಎಂಬುದು ವಿಶೇಷ.
ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿಗೆ ಅಧಿಕಾರಿಗಳು ದೇವಾಲಯದ ಸ್ಥಳವನ್ನು ಸಮೀಕ್ಷೆ ಮಾಡಿ ಸುಸಜ್ಜಿತಗೊಳಿಸಿದಾಗ, ಸ್ಥಳೀಯರು ಯಾವುದೇ ಆಕ್ಷೇಪಣೆಗಳಿಲ್ಲದೆ ದೇವಾಲಯವನ್ನು ಪ್ರತ್ಯೇಕವಾಗಿ ನವೀಕರಿಸಲು ಕ್ರಮ ಕೈಗೊಂಡರು. ತಂತ್ರಿಗಳೊಂದಿಗೆ ಸಮಾಲೋಚಿಸಿ, ದೇವರ ಮೂರ್ತಿಯನ್ನು ಬೇರೆಡೆಗೆ ಬದಲಾಯಿಸಲು ಸಮಿತಿ ರಚಿಸಲಾಯಿತು. ದೇವಾಲಯದ ಆಡಳಿತ ಸಮಿತಿ ಮತ್ತು ಸ್ಥಳೀಯರ ಸರ್ವಾನುಮತದ ನಿರ್ಣಯವನ್ನು ಇಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಜನಪರ ಸಮಿತಿಯ ಕಾರ್ಯದರ್ಶಿ ರತೀಶ್ ಚಕ್ರಪುರಂ ಹೇಳಿರುವರು.
ದೇವರ ಚೈತನ್ಯಕ್ಕೆ ಕ್ಷುತಿಬಾರದಿರಲು ದೇವಾಲಯದ ಬಳಿಯ ತಾತ್ಕಾಲಿಕ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಜು. 13 ರಿಂದ 15 ರವರೆಗೆ ನಡೆದ ವಿಧಿವಿಧಾನಗಳಲ್ಲಿ ದೇವಾಲಯದ ತಂತ್ರಿವರ್ಯ ನೆಲ್ಲಿಯೊಟ್ಟು ವಿಷ್ಣು ನಂಬೂದಿರಿಪಾಡ್ ಬಾಲಾಲಯ ಪ್ರತಿಷ್ಠಾ ವಿಧಿ ನಿರ್ವಹಿಸಿದರು. ಹೊಸ ದೇವಾಲಯವನ್ನು ನಿರ್ಮಿಸಿ ಪುನಃ ಪ್ರತಿಷ್ಠೆಯವರೆಗೆ ಬಾಲಾಲಯದಲ್ಲಿ ಪೂಜೆ ಮುಂದುವರಿಯುತ್ತದೆ.
ಈ ಸಮಾರಂಭಗಳ ಕೆಲವು ದಿನಗಳ ಬಳಿಕ, ಮೊನ್ನೆಯಷ್ಟೇ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ.ವಿ.ಕುಂಞÂ ಕೃಷ್ಣನ್ ಅವರು ದೇವಾಲಯದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಅರ್ಜಿಯ ವಿಚಾರಣೆಯಲ್ಲಿ ನೀಡಿದ ಮಹತ್ವದ ತೀರ್ಪಿನಂತೆ ರಾ.ಹೆದ್ದಾರಿಗಳ ಅಭಿವೃದ್ದಿ ಹಿನ್ನೆಲೆಯಲ್ಲಿ ಆರಾಧನಾಲಯಗಳ ಸ್ಥಳಾಂತರಕ್ಕೆ ದೇವರು ಕ್ಷಮಿಸುತ್ತಾನೆ ಎಂದು ಹೇಳಿದ್ದರು.
ಒಂದು ಸಾವಿರ ವರ್ಷಗಳ ಪ್ರಾಚೀನತೆಯ ಆದಿ ದೇವಾಲಯ ಇದು. ಈ ದೇವಾಲಯವನ್ನು ಸಾರ್ವಭೌಮ ಕೋಕಿನಿ ಕುಲದವರು ನಡೆಸುತ್ತಿದ್ದರು. ನಂತರ ಇದನ್ನು ಸ್ಥಳೀಯರು ನಿರ್ವಹಿಸುತ್ತಿರುವರು. ಉತ್ಸವವು ಪ್ರತಿವರ್ಷ ತುಲಾರಾಶಿಯ 14 ರಿಂದ 17 ರವರೆಗೆ ನಡೆಯುತ್ತದೆ. ಈ ಕ್ಷೇತ್ರದಲ್ಲಿ ವಿಷ್ಣುವಿನ ಅಗ್ನಿ ಪ್ರವೇಶ ಎಂಬ ಆಚರಣೆ ಮುಖ್ಯ. ರತೀಶ್ ಕಾರ್ಯದರ್ಶಿಯಾಗಿರುವ ವಿ.ವಿ.ಗಂಗಾಧರನ್ ನೇತೃತ್ವದ ಜನಪರ ಕಮಿಟಿಯು ಖಜಾಂಜಿ ಚಂದ್ರನ್ ಕಲಿಯಾಂತಿಲ್ ತಂಡದೊಂದಿಗೆ ಪ್ರಸ್ತುತ ಹೊಸ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ.