ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಅಂತ್ಯಗೊಂಡಿದೆಯೇ? ಈ ಪ್ರಶ್ನೆ ಕಣ್ಣ ಮುಂದಿರುವಾಗಲೇ ಮೂರನೇ ಅಲೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮೊನ್ನೆ ಮೊನ್ನೆಯಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಂ ಗೆಬ್ರೆಯೋಸಿಸ್ ಮೂರನೇ ಅಲೆ ಕುರಿತು ಎಚ್ಚರಿಕೆ ನೀಡಿದ್ದಾರೆ. ನಾವೀಗ ಕೊರೊನಾ ಮೂರನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ಕುರಿತು ಹಲವು ಅಧ್ಯಯನಗಳು ನಡೆಯುತ್ತಿದ್ದು, ಆಗಸ್ಟ್ ಕೊನೆ ವೇಳೆಗೆ ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದೆ. ಆದರೆ ಪ್ರಸ್ತುತ ಹಲವು ಅಂಶಗಳನ್ನು ಗಮನಿಸಿ, ದೇಶದಲ್ಲಿ ಈಗಾಗಲೇ ಮೂರನೇ ಅಲೆ ಆರಂಭವಾಗಿದೆ ಎಂಬ ಅನುಮಾನವನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ. ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ಕೆಲವು ಅಂಕಿಅಂಶಗಳೂ ಕಾಣುತ್ತಿವೆ. ಯಾವ ಅಂಶಗಳು ದೇಶದಲ್ಲಿ ಕೊರೊನಾ ಮೂರನೇ ಅಲೆ ಆರಂಭವನ್ನು ಸೂಚಿಸುತ್ತಿವೆ?
55 ದಿನಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ
55 ದಿನಗಳ ನಂತರ ಜುಲೈ 7ರಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಆ ದಿನ 784 ಸಕ್ರಿಯ ಪ್ರಕರಣಗಳು ಸೇರ್ಪಡೆಯಾಗಿದ್ದವು. ಇದರಿಂದ ದೇಶದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 460704ಕ್ಕೆ ಏರಿಕೆಯಾಗಿತ್ತು. ಇದಾದ ಒಂದು ವಾರದ ನಂತರ ಜುಲೈ 14ರಂದು ಮತ್ತೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತ್ತು. 2095 ಸಕ್ರಿಯ ಪ್ರಕರಣಗಳು ಕಂಡುಬಂದಿದ್ದವು. ಇದರೊಂದಿಗೆ ಇನ್ನೂ 73 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ 10%ಗೂ ಹೆಚ್ಚಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇವೆಲ್ಲವೂ ಕೊರೊನಾ ಮೂರನೇ ಅಲೆ ಆರಂಭದ ಸೂಚನೆಯಾಗಿರುವ ಅನುಮಾನ ಮೂಡಿದೆ.
ಮರುಸೋಂಕಿತ ದರದಲ್ಲಿಯೂ ಕ್ರಮೇಣ ಹೆಚ್ಚಳ
ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿವೆ. ಆದರೆ ಹಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ತಗ್ಗಿಲ್ಲ. ಜೊತೆಗೆ ಕೆಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರು ಸೋಂಕಿತ ದರ ಏರಿಕೆಯಾಗಿರುವುದಾಗಿ ಗೃಹ ಸಚಿವಾಲಯ ಎಚ್ಚರಿಸಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದರ ಪ್ರಮಾಣವನ್ನೇ "ಆರ್" (reproductive rate) ದರ ಎನ್ನಲಾಗುತ್ತದೆ.
ಜುಲೈ 14ರಂದು "ಆರ್" ಮೌಲ್ಯವು 0.95 ಆಗಿತ್ತು. ಒಂದು ವಾರದ ಹಿಂದೆ ಈ ದರ 0.89 ಇದ್ದು, ನಾಲ್ಕು ವಾರಗಳ ಹಿಂದೆ ಈ ದರ 0.74 ಆಗಿತ್ತು. ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭ ಈ ಸಂಖ್ಯೆ 1.32 ಇತ್ತು. ಹೀಗಾಗಿ ಸದ್ದಿಲ್ಲದೇ ಮರು ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಎಚ್ಚರಿಕೆಯಿಂದಿರುವುದು ಅವಶ್ಯಕ ಎಂದು ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೊನಾ ಪ್ರಕರಣಗಳು
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನನಿತ್ಯದ ಕೊರೊನಾ ಪ್ರಕರಣಗಳು ತಗ್ಗಿಲ್ಲ. ಹೀಗಾಗಿ ಕೇರಳದಲ್ಲಿ ಇದು ಮೂರನೇ ಅಲೆ ಆರಂಭದ ಸೂಚನೆಯಿರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು.
ಆದರೆ, 'ಕೇರಳದ ಸರಾಸರಿ ಹೊಸ ದೈನಂದಿನ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದರೂ, ಇದು ಸಂಭವನೀಯ ಮೂರನೇ ಅಲೆಯ ಆರಂಭವೆಂದು ಪರಿಗಣಿಸಬಾರದು. ಏಕೆಂದರೆ ಈಗ ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ, ಒಮ್ಮೆಲೇ ಏರಿಕೆಯಾಗುತ್ತಿಲ್ಲ. ಈ ಮೂರನೇ ಅಲೆಯು ಆಗಸ್ಟ್‌ನಲ್ಲಿ ಬರಬಹುದು ಎಂದು ಕೆಲವು ತಜ್ಞರು ಊಹಿಸಿದ್ದಾರೆ,'' ಎಂದು ಇಂಡಿಯಾ ಸ್ಪೆಂಡ್ ವರದಿಯು ವಿಶ್ಲೇಷಿಸಿದೆ.
ಭಾರತದಲ್ಲಿ ಇನ್ನೂ 88 ಕೋಟಿ ಜನರಿಗೆ ಲಸಿಕೆ ನೀಡಬೇಕಿದೆ
ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದೆ. ಆದರೆ ಕೊರೊನಾ ಲಸಿಕಾ ಅಭಿಯಾನ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಇದು ಮೂರನೇ ಅಲೆಗೆ ಆಹ್ವಾನ ನೀಡಬಹುದು ಎನ್ನಲಾಗಿದೆ. ಭಾರತದಲ್ಲಿ ಇನ್ನೂ 88 ಕೋಟಿ ಜನರಿಗೆ ಲಸಿಕೆ ನೀಡುವುದು ಬಾಕಿ ಇದೆ. ಇದರೊಂದಿಗೆ, ದೇಶದಲ್ಲಿ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆಯೂ ತಗ್ಗಿದೆ.
ಇಂಥ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿಯಮಗಳ ಉಲ್ಲಂಘನೆ ಸಲ್ಲದು. ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುವಲ್ಲಿ ಸಡಿಲತೆ ಕಾಣುತ್ತಿದೆ ಎಂದು ಪ್ರಧಾನಿ ಮೋದಿ ಈಚೆಗೆ ಹೇಳಿಕೆ ನೀಡಿದ್ದರು. ಇದು ಕೊರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದರು.