ನವದೆಹಲಿ: ಕೋವಿಡ್-19 ಪಿಡುಗಿನ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಹಂಚಿಕೆಗೆ ಸಂಬಂಧಿಸಿದ ನೀತಿಯನ್ನು ಕೇಂದ್ರ ಸರ್ಕಾರ ಬದಲಾಯಿಸಿತು. ದೇಶದ ಆಸ್ಪತ್ರೆಗಳಲ್ಲಿ ಪ್ರಾಣವಾಯುವಿನ ಕೊರತೆಯುಂಟಾಗಿ, ಇದು ದೊಡ್ಡ ದುರಂತಕ್ಕೆ ಕಾರಣವಾಯಿತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಬುಧವಾರ ಆರೋಪಿಸಿದರು.
ಆನ್‌ಲೈನ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಆಮ್ಲಜನಕ ಪೂರೈಕೆಯನ್ನು ನಿರ್ವಹಿಸುವಲ್ಲಿನ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ' ಎಂದು ಟೀಕಿಸಿದರು.
'ವೈದ್ಯಕೀಯ ಆಮ್ಲಜನಕ ಕೊರತೆಯಿಂದಾಗಿ ಸಂಭವಿಸಿದವು ಎನ್ನಲಾಗುವ ಸಾವುಗಳ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲು ದೆಹಲಿ ಸರ್ಕಾರ ಸಿದ್ಧವಿದೆ. ಸಮಿತಿ ರಚನೆಗೆ ಕೇಂದ್ರದ ಅನುಮತಿ ಅಗತ್ಯ. ಆದರೆ, ಕೇಂದ್ರ ಸರ್ಕಾರ ಅನುಮತಿಯನ್ನೇ ನೀಡುತ್ತಿಲ್ಲ' ಎಂದು ದೂರಿದರು.
'ಆಮ್ಲಜನಕ ಕೊರತೆ ಹಾಗೂ ಅದರಿಂದಾಗಿ ಸಂಭವಿಸಿದ ಸಾವುಗಳ ಕುರಿತು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಸುಳ್ಳು ಹೇಳಿದೆ. ಏಪ್ರಿಲ್ 15ರಿಂದ ಮೇ 5ರ ವರೆಗಿನ ಅವಧಿಯಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಅಭಾವ ಕಂಡುಬಂತು. ಕೋವಿಡ್ ರೋಗಿಗಳ ಸಾವಿಗೆ ಇದಕ್ಕಿಂತ ದೊಡ್ಡ ಕಾರಣ ಬೇಕೇ' ಎಂದು ಪ್ರಶ್ನಿಸಿದರು.