ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆದಿದ್ದು, ನೂತನ ಸಚಿವ ಸಂಪುಟಕ್ಕೆ 43 ಮಂದಿ ಸಂಸದರು ಸೇರ್ಪಡೆಯಾಗಲಿದ್ದಾರೆ.
ಈ ಬಾರಿ ಬೃಹತ್ ಸಂಪುಟ ವಿಸ್ತರಣೆ ಮಾಡಲಾಗುತ್ತಿದ್ದು, ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 50 ವರ್ಷಕ್ಕೂ ಕಡಿಮೆ ವಯಸ್ಸಿನ ಯುವ ಸಚಿವರಿಗೆ ಕ್ಯಾಬಿನೆಟ್ ಮಂತ್ರಿಯಾಗಲು ಅವಕಾಶ ಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವ ಸಚಿವರ ಜೊತೆಗೆ ಮಹಿಳಾ ಸಂಸದರಿಗೂ ಆದ್ಯತೆ ನೀಡಲಾಗಿದ್ದು, ಈ ಬಾರಿ ಕ್ಯಾಬಿನೆಟ್‌ನಲ್ಲಿ 11 ಮಹಿಳಾ ಸಚಿವರು ಇರಲಿದ್ದಾರೆ. 24 ಒಬಿಸಿ, 12 ಎಸ್‌ಸಿ, 8 ಎಸ್.ಟಿ, 5 ಅಲ್ಪಸಂಖ್ಯಾತ ಸಚಿವರು, 13 ವಕೀಲರು, 6 ವೈದ್ಯರು, 5 ಇಂಜಿನೀಯರ್‌ಗಳು ಹಾಗೂ ನಾಗರಿಕ ಸೇವೆಯಲ್ಲಿರುವ 7 ಪ್ರಮುಖರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯದಿಂದ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬೀದರ್ ಸಂಸದ ಭಗವಂತ ಖೂಬಾಗೆ ಕೇಂದ್ರ ಸಚಿವ ಸ್ಥಾನ ದೊರಕಿದೆ.
ಅದೇ ರೀತಿ ರಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಪ್ರಹ್ಲಾದ್ ಜೋಶಿ ಹಾಗೂ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಹಣಕಾಸು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ಸೇರಿ ಕರ್ನಾಟಕದಿಂದ ೬ ಸಂಸದರು ಸಚಿವರಾಗಲಿದ್ದಾರೆ.