ನವದೆಹಲಿ: ಕೇಂದ್ರ ಸರ್ಕಾರದ ಜತೆ ಸಂಘರ್ಷವನ್ನು ಹೊಂದಿರುವ ಸೋಷಿಯಲ್ ಮೀಡಿಯಾ ದಿಗ್ಗಜ ಸಂಸ್ಥೆಗಳಲ್ಲಿ ಒಂದಾಗಿರುವ ಟ್ವಿಟರ್ಗೆ ಕಳೆದ ಕೆಲವು ದಿನಗಳಿಂದ ನಾನಾ ರೀತಿಯಲ್ಲಿ ಹಿನ್ನಡೆಯಾಗುತ್ತಿದ್ದು, ಭಾರತದ ಕಾನೂನು ಪಾಲಿಸದ ಟ್ವಿಟರ್ ವಿರುದ್ಧ ಕಾನೂನಿನ ಕುಣಿಕೆಗಳು ಬಿಗಿಯಾಗುತ್ತಲೇ ಇವೆ.
ಮೊನ್ನೆಮೊನ್ನೆಯಷ್ಟೇ ವಿಶ್ವದ ಭೂಪಟವನ್ನು ಪ್ರಕಟಿಸಿ, ಅದರಲ್ಲಿ ಜಮ್ಮು-ಕಾಶ್ಮೀರ, ಲಡಾಖ್ಗಳಿರದ ಭಾರತದ ನಕಾಶೆಯನ್ನು ತೋರಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್ಗೆ, ಆ ಹಿನ್ನೆಲೆಯಲ್ಲಿ ಕೇಸು ಎದುರಿಸುವಂತಾಗಿದೆ.
ಬಳಿಕ ಶಿಶುಕಾಮದ ಕುರಿತ ಪೋಸ್ಟ್ಗಳು ಟ್ವಿಟರ್ನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕಿಡಿಕಾಡಿರುವ ರಾಷ್ಟ್ರೀಯ ಮಹಿಳಾ ಆಯೋಗ ಅಂಥ ಎಲ್ಲ ಪೋಸ್ಟ್ಗಳನ್ನು ವಾರದೊಳಗೆ ತೆಗೆದುಹಾಕುವಂತೆ ಸೂಚಿಸಿದೆ. ಮಾತ್ರವಲ್ಲ ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಹತ್ತು ದಿನಗಳೊಳಗೆ ತಿಳಿಸಬೇಕು ಎಂದು ಟ್ವಿಟರ್ಗೆ ಮಹಿಳಾ ಆಯೋಗ ತಾಕೀತು ಮಾಡಿದೆ.