HEALTH TIPS

ಕೊರೊನಾ ಮೂರನೇ ಅಲೆ ಆತಂಕದ ನಡುವೆ ಸಮಾಧಾನಕರ ಸಂಗತಿ ಹೇಳಿದ ಐಸಿಎಂಆರ್

           ನವದೆಹಲಿ: ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆ ಕುರಿತು ಆತಂಕ ಶುರುವಾಗಿದ್ದು, ಈ ಅಲೆಯ ಪರಿಣಾಮಗಳ ಕುರಿತ ಚರ್ಚೆಗಳು ಈಗಾಗಲೇ ಆರಂಭಗೊಂಡಿವೆ. ಈ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲುವ ಎಚ್ಚರಿಕೆಯನ್ನು ಕೆಲವು ತಜ್ಞರು ನೀಡಿದ್ದಾರೆ. ಈ ಬೆನ್ನಲ್ಲೇ ಐಸಿಎಂಆರ್ ವೈದ್ಯರೊಬ್ಬರು ಸಮಾಧಾನಕರ ಸಂಗತಿಯೊಂದನ್ನು ತಿಳಿಸಿದ್ದಾರೆ.

        ಆಗಸ್ಟ್‌ ತಿಂಗಳ ಕೊನೆಯ ವೇಳೆಗೆ ಭಾರತದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಬಹುದು. ಆದರೆ ಈ ಅಲೆಯ ತೀವ್ರತೆ ಎರಡನೇ ಅಲೆಯಷ್ಟು ಇರುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಮೀರನ್ ಪಾಂಡಾ ತಿಳಿಸಿದ್ದಾರೆ.

          "ರಾಷ್ಟ್ರಾದ್ಯಂತ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ. ಆದರೆ ಅದು ಎರಡನೇ ಅಲೆಯಷ್ಟು ಅಪಾಯಕಾರಿ ಎನ್ನಲಾಗುವುದಿಲ್ಲ" ಎಂದಿದ್ದಾರೆ. ಸಂಭಾವ್ಯ ಕೊರೊನಾ ಮೂರನೇ ಅಲೆ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

           ಕೊರೊನಾ ಮೂರನೇ ಅಲೆ ಪ್ರೇರೇಪಿಸಬಲ್ಲ ನಾಲ್ಕು ಅಂಶಗಳು...

ಕೊರೊನಾ ಮೂರನೇ ಅಲೆಯನ್ನು ಪ್ರೇರೇಪಿಸಬಲ್ಲ ನಾಲ್ಕು ಅಂಶಗಳನ್ನು ಡಾ. ಪಾಂಡಾ ಪ್ರಸ್ತಾಪಿಸಿದ್ದಾರೆ. ಮೊದಲನೆಯದಾಗಿ, ರೋಗನಿರೋಧಕ ಶಕ್ತಿಯಲ್ಲಿನ ಕುಗ್ಗುವಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜನರಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿದರೆ ಮೂರನೇ ಅಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳವಾಗಬಹುದು ಎಂದಿದ್ದಾರೆ. ಎರಡನೆಯದಾಗಿ, ಕೊರೊನಾ ರೂಪಾಂತರಗಳು. ರೋಗನಿರೋಧಕ ಶಕ್ತಿಯನ್ನು ಮೀರಿ ಗಂಭೀರ ರೂಪ ತಾಳಬಲ್ಲ ರೂಪಾಂತರಗಳು ಮೂರನೇ ಅಲೆಗೆ ಪ್ರಚೋದನೆ ನೀಡಬಹುದು. ಹೀಗಾಗಿ ಇವುಗಳ ನಿಯಂತ್ರಣ ಅವಶ್ಯಕ ಎಂದಿದ್ದಾರೆ.

                 ಸವಾಲು ಒಡ್ಡುತ್ತಿರುವ ರೂಪಾಂತರಗಳು

     ಮೂರನೆಯದಾಗಿ, ಕೊರೊನಾ ಸೋಂಕು ದಿನಕ್ಕೊಂದು ರೂಪಾಂತರ ಪಡೆಯುತ್ತಿದ್ದು, ಈ ರೂಪಾಂತರಗಳು ಮೂಲ ಸೋಂಕಿಗಿಂತ ಅತಿ ವೇಗವಾಗಿ ಹರಡುತ್ತಿವೆ. ಈ ಒಂದು ಲಕ್ಷಣದಿಂದ ಸೋಂಕಿನ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿ ಮೂರನೇ ಅಲೆಗೆ ಕಾರಣವಾಗಬಹುದು ಎಂದಿದ್ದಾರೆ. ಕೊನೆಯದಾಗಿ, ಯಾವುದೇ ಮುಂಜಾಗ್ರತೆಯಿಲ್ಲದೇ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸುತ್ತಿರುವುದು ಹೊಸ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂದು ಅಂದಾಜಿಸಿದ್ದಾರೆ. ಈ ನಾಲ್ಕು ಅಂಶಗಳ ಮೇಲೆ ನಿಗಾ ಇಟ್ಟಲ್ಲಿ ಮೂರನೇ ಅಲೆ ತೀವ್ರತೆಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದ್ದಾರೆ.

         ಕೊರೊನಾ ಸೋಂಕು ಹಾಗೂ ಅಲೆಗಳ ಕುರಿತು ಈಗಾಗಲೇ ಪ್ರಾಥಮಿಕ ಜ್ಞಾನ ಲಭ್ಯವಾಗಿದೆ. ಸೋಂಕಿಗೆ ವಿರುದ್ಧವಾಗಿ ಲಸಿಕೆಗಳನ್ನೂ ನೀಡಲಾಗುತ್ತಿದೆ. ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಆರೋಗ್ಯ ಸೇವೆಗಳನ್ನು ವಿಸ್ತೃತಗೊಳಿಸಲಾಗಿದೆ.

       ಹೀಗಾಗಿ ಕೊರೊನಾ ಎರಡನೇ ಅಲೆಯಷ್ಟು ಮೂರನೇ ಅಲೆ ತೀವ್ರತೆ ಕಾಡುವುದಿಲ್ಲ ಎನ್ನಬಹುದಾಗಿದೆ. ಇದಾಗ್ಯೂ ರೂಪಾಂತರಗಳ ಸ್ವರೂಪವನ್ನು ಅಂದಾಜಿಸುವುದು ಕಷ್ಟವಾದ್ದರಿಂದ ಎಚ್ಚರಿಕೆ ಮರೆಯುವಂತಿಲ್ಲ ಎಂದಿದ್ದಾರೆ.

           ವಿಶ್ವಾದ್ಯಂತ ಡೆಲ್ಟಾ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾವು ಕೊರೊನಾ ಸೋಂಕಿನ ಮೂರನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ತಿಳಿಸಿದ್ದಾರೆ.


          ಒಂದೆಡೆ ಡೆಲ್ಟಾ ರೂಪಾಂತರಿ ಸಂಖ್ಯೆ ಹೆಚ್ಚುತ್ತಿದೆ, ಇನ್ನೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕೋವಿಡ್ ನಿಯಮಗಳನ್ನು ಮರೆಯುತ್ತಿದ್ದಾರೆ ಇದು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ. ಇದರ ಮಧ್ಯೆ ಡೆಲ್ಟಾ ರೂಪಾಂತರವು 111ಕ್ಕೂ ಹೆಚ್ಚು ದೇಶಗಳಲ್ಲಿದೆ. ಇದು ಈಗಾಗಲೇ ವಿಶ್ವಾದ್ಯಂತ ಹರಡಲು ಆರಂಭವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries