ಪ್ಯಾರಿಸ್ : ಮೊರೊಕನ್ ಗುಪ್ತಚರ ಸೇವೆಗಳು ಇಸ್ರೇಲಿ ಮಾಲ್‌ವೇರ್ ಪೆಗಾಸಸ್ ಅನ್ನು ಹಲವಾರು ಫ್ರೆಂಚ್ ಪತ್ರಕರ್ತರ ಮೇಲೆ ಕಣ್ಣಿಡಲು ಬಳಸಿಕೊಂಡಿವೆ ಎಂಬ ಆರೋಪದ ಬಗ್ಗೆ ತನಿಖೆ ಆರಂಭಿಸಿದೆ ಎಂದು ಪ್ಯಾರಿಸ್‌ನಲ್ಲಿನ ಪ್ರಾಸಿಕ್ಯೂಟರ್‌ಗಳು (ವಕೀಲರು) ಮಂಗಳವಾರ ಹೇಳಿದ್ದಾರೆ.
ವೈಯಕ್ತಿಕ ಗೌಪ್ಯತೆ ಉಲ್ಲಂಘನೆ, ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ಹ್ಯಾಕ್ ಮಾಡುವುದು ಹಾಗೂ ಕ್ರಿಮಿನಲ್ ಅಸೋಸಿಯೇಷನ್ ಸೇರಿದಂತೆ 10 ವಿಭಿನ್ನ ಆರೋಪಗಳನ್ನು ತನಿಖೆಯು ಪರಿಶೀಲಿಸುತ್ತಿದೆ.
ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ಸೋಮವಾರ ಕಾನೂನು ದೂರು ದಾಖಲಿಸಿದೆ. ತನಿಖಾ ಪತ್ರಿಕೆ ಲೆ ಕೆನಾರ್ಡ್ ಎನ್‌ಚೈನ್ ಬೇಹುಗಾರಿಕೆ ವರದಿಯನ್ನು ಮೊರೊಕ್ಕೊ ನಿರಾಕರಿಸಿದೆ.
50,000 ದೂರವಾಣಿ ಸಂಖ್ಯೆಗಳ ಸೋರಿಕೆಯಾದ ಪಟ್ಟಿಯನ್ನು ಆಧರಿಸಿ ದಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೆ ಮಾಂಡೆ ಮತ್ತು ಇತರ ಮಾಧ್ಯಮಗಳ ಸಹಯೋಗದ ತನಿಖೆ ಮಾಡಿದೆ. ಎನ್‌ಎಸ್‌ಒ ಗ್ರೂಪ್‌ನ ಮಾಲ್‌ವೇರ್ ಬಳಸಿ ವಿಶ್ವಾದ್ಯಂತ ಬೇಹುಗಾರಿಕೆ ಮಾಡುವುದು ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ವಿಸ್ತಾರವಾಗಿದೆ ಎಂದು ಹೇಳಿದೆ.
ಮೀಡಿಯಾಪಾರ್ಟ್ ತನ್ನ ಸಂಸ್ಥಾಪಕ ಎಡ್ವಿ ಪ್ಲೆನೆಲ್ ಮತ್ತು ಪತ್ರಕರ್ತರ ಫೋನ್‌ಗಳನ್ನು ಕೂಡಾ ಮೊರೊಕನ್ ಗುಪ್ತಚರ ಸೇವೆಗಳು ಹ್ಯಾಕ್ ಮಾಡಿದೆ ಎಂದು ಬಹಿರಂಗಪಡಿಸಿದೆ. ಫ್ರೆಂಚ್ ಮಾಧ್ಯಮ ಕಂಪನಿಗಳಲ್ಲಿ ಕೆಲಸ ಮಾಡುವ ಇತರ ಪತ್ರಕರ್ತರು, ಲೆ ಮೊಂಡೆ ಮತ್ತು ಅಜೆನ್ಸ್ ಫ್ರಾನ್ಸ್-ಪ್ರೆಸ್ಸೆ ನೌಕರರು ಸೇರಿದಂತೆ ಹಲವಾರು ಮಂದಿಯ ಮೊಬೈಲ್‌ಗಳನ್ನು ಮೊರೊಕನ್ ಭದ್ರತಾ ಸೇವೆಯು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಆದರೆ ಮೊರೊಕ್ಕೊ ಆಡಳಿತವು ಈ ಆರೋಪವನ್ನು ನಿರಾಕರಿಸಿದೆ. "ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಬಲ್ಲ ಕಂಪ್ಯೂಟರ್ ಸಾಫ್ಟ್‌ವೇರ್ ಅನ್ನು ಎಂದಿಗೂ ಪೆಗಾಸಸ್‌ನಿಂದ ಪಡೆದುಕೊಂಡಿಲ್ಲ," ಎಂದು ಹೇಳಿದೆ.
ಈ ನಡುವೆ ಭಾರತದಲ್ಲೂ ಪೆಗಾಸಸ್ ಬೇಹುಗಾರಿಕೆ ಹಗರಣವು ಭಾರೀ ಸಂಚಲನವನ್ನು ಸೃಷ್ಟಿ ಮಾಡಿದೆ. ಭಾರತದ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯನ್ನು "ದಿ ವೈರ್" ಸೋಮವಾರ ಬಹಿರಂಗಪಡಿಸಿತ್ತು.
ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು, ನ್ಯಾಯಾಧೀಶರುಗಳು, ವಕೀಲರು, ಉದ್ಯಮಿಗಳು, ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿ ಸುಮಾರು 300 ಭಾರತೀಯರ ಮೊಬೈಲ್‌ಗಳು ಹ್ಯಾಕ್ ಆಗಿವೆ ಎಂದು ವರದಿ ತಿಳಿಸಿತ್ತು.
ಈ ಬೆನ್ನಲ್ಲೇ ವಿರೋಧ ಪಕ್ಷ ಹಾಗೂ ಆಡಳಿತರೂಢ ಬಿಜೆಪಿಯ ನಡುವೆ ವಾಕ್ಸಮರ ಆರಂಭವಾಗಿದೆ. ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಮಾತನಾಡಿದ ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಅವುಗಳನ್ನು ಪ್ರಕಟಿಸಿದ್ದು "ಕಾಕತಾಳೀಯವಲ್ಲ" ಎಂದು ಹೇಳಿದ್ದಾರೆ. ಹಾಗೆಯೇ ಈ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. ಈ ನಡುವೆ ಮೊಬೈಲ್ ಹ್ಯಾಕ್ ಆದ ಮುನ್ನೂರು ಜನರ ಪಟ್ಟಿಯಲ್ಲಿ ಅಶ್ವಿನಿ ವೈಷ್ಣವ್ ಹೆಸರು ಕೂಡಾ ಇದೆ ಎಂದು ಹೇಳಲಾಗಿದೆ.
ಈ ನಡುವೆ ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆ ನಡೆಯಬೇಕು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ತನಿಖೆ ನಡೆಯಬೇಕು, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದಾರೆ. ಆದರೆ ಅಮಿತ್ ಶಾ, ದೇಶದ ಪ್ರಗತಿ ಸಹಿಸಲಾಗದವರು ಈ ಬೇಹುಗಾರಿಕೆ ಆರೋಪವನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಜುಲೈ 22ರಂದು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕಗಳು ರಾಜಭವನ ಚಲೋ ನಡೆಸಲಿವೆ. ಪ್ರತಿಭಟನಾ ಮೆರವಣಿಗೆ ಮೂಲಕ ರಾಜಭವನಕ್ಕೆ ತೆರಳಿ ದೂರು ಸಲ್ಲಿಸಲು ಕಾಂಗ್ರೆಸ್ ತೀರ್ಮಾನಿಸಿದೆ.