ತಿರುವನಂತಪುರ: ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳಲ್ಲಿ ಯಾವುದೇ ಕಾರಣಕ್ಕೂ ಸದ್ಯ ಸಡಿಲವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರಸ್ತುತ ನಿರ್ಬಂಧಗಳು ಯಥಾ ರೀತಿ ಮುಂದುವರಿಯುವುದಾಗಿ ಅವರು ಹೇಳಿರುವರು. ಇದೇ ವೇಳೆ, ನಿರ್ಬಂಧಗಳೊಂದಿಗೆ ಬಟ್ಟೆ ಅಂಗಡಿಗಳನ್ನು ತೆರೆಯುವ ಯೋಜನೆಗಳಿವೆ ಎಂದು ಸಿಎಂ ಹೇಳಿದರು. ನಿನ್ನೆ ಸಂಜೆ ನಡೆದ ಕೊರೋನಾ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಓಣಂಗೆ ಮುಂಚಿತವಾಗಿ ರಾಜ್ಯದಲ್ಲಿ ಲಸಿಕೆ ಚುರುಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಕೇಂದ್ರದಿಂದ ಹೆಚ್ಚಿನ ಲಸಿಕೆ ಪ್ರಮಾಣಗಳು ಬೇಕಾಗುತ್ತವೆ. ಬುಧವಾರ ಪಡೆದ ಐದು ಲಕ್ಷ ಡೋಸ್ ಲಸಿಕೆಯನ್ನು ಎರಡು ದಿನಗಳಲ್ಲಿ ನೀಡಲಾಗುವುದು. ಮೊನ್ನೆ ದಾಖಲೆಯ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಮುಂದುವರಿಯಲಿದೆ ಎಂದು ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಸ್ವೀಕರಿಸಲು ಬರುವವರಿಗೆ ಆರ್‍ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಪರಿಗಣಿಸಬಾರದು ಎಂದು ಸಿಎಂ ಹೇಳಿದರು.
ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಸ್ಥಳೀಯಾಡಳಿತ, ಆರೋಗ್ಯ, ಕಂದಾಯ ಮತ್ತು ಪೋಲೀಸ್ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು. ನಿಗದಿತ ಮಾನದಂಡಗಳ ಪ್ರಕಾರ ಲಸಿಕೆ ನೀಡಬೇಕು. ಕಟ್ಟುನಿಟ್ಟಾದ ಕೊರೋನಾ ಪ್ರೋಟೋಕಾಲ್ ಅನ್ನು ಅನುಸರಿಸಿ ಬಟ್ಟೆ ಅಂಗಡಿಗಳನ್ನು ತೆರೆಯುವುದನ್ನು ಪರಿಗಣಿಸಿ. ಲಸಿಕೆ ಪಡೆದ ನಿಗದಿತ ಸಂಖ್ಯೆಯ ನೌಕರರೊಂದಿಗೆ ಅಂಗಡಿಗಳನ್ನು ತೆರೆಯಲು ವ್ಯವಸ್ಥೆ ಮಾಡಬೇಕು ಎಂದು ಸಿಎಂ ಸೂಚಿಸಿದರು.