ಮುಂಬೈ: ಕರೊನಾ ಸೋಂಕು ನಮ್ಮ ದೇಹಕ್ಕೆ ಸೇರಬಾರದು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ಮಾರ್ಗಗಳನ್ನು ನಾವು ಈಗಾಗಲೇ ಕಂಡುಕೊಂಡಿದ್ದೇವೆ. ಅದರಲ್ಲಿ ಅತಿ ಪ್ರಮುಖವಾಗಿರುವುದು ಅಮೃತಬಳ್ಳಿ ಕಷಾಯ. ಆದರೆ ಈ ಅಮೃತಬಳ್ಳಿ ಕಷಾಯವನ್ನು ಅತಿಯಾಗಿ ಸೇವಿಸಿದರೆ ನಿಮ್ಮ ಜೀವಕ್ಕೇ ಆಪತ್ತು ಬಂದುಬಿಡಬಹುದು ಎನ್ನುತ್ತಾರೆ ತಜ್ಞರು.
ಮುಂಬೈನಲ್ಲಿ ಕಳೆದ ವರ್ಷದ ಸೆಪ್ಟೆಂಬರ್ನಿಂದ ಡಿಸೆಂಬರ್ ತಿಂಗಳಿನಲ್ಲಿ ಒಟ್ಟು ಆರು ಮಂದಿ ಲಿವರ್ ಸಂಬಂಧಿತ ಕಾಯಿಲೆಗೆ ತುತ್ತಾಗಿದ್ದಾರೆ. ಅವರೆಲ್ಲರೂ ಅತಿಯಾಗಿ ಅಮೃತಬಳ್ಳಿ ಕಷಾಯ ಕುಡಿದಿದ್ದಾರೆ. ಇದು ಗಿಡಮೂಲಿಕೆಗಳ ಟಿನೋಸ್ಪೊರಾ ಕಾರ್ಡಿಫೋಲಿಯಾಕ್ಕೆ ಸಂಬಂಧಿಸಿದೆ ಎಂದು ಹೆಪಟಾಲಜಿಸ್ಟ್ ಡಾ. ಆಭಾ ನಾಗ್ರಾಲ್, ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಪ್ರಾಯೋಗಿಕ ಹೆಪಟಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕರು ಹೇಳಿದ್ದಾರೆ. ಆ ಜರ್ನಲ್ನನ್ನು ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ ಪ್ರಕಟಿಸಿದೆ. ಇದೇ ರೀತಿಯ ಸಮಸ್ಯೆಯಿಂದ ಓರ್ವ ರೋಗಿ ಸಾವನ್ನಪ್ಪಿರುವುದಾಗಿ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.
ಈ ರೀತಿ ಸಮಸ್ಯೆ ಕಾಣಿಸಿಕೊಂಡ ರೋಗಿಗಳಲ್ಲಿ ಆಯಂಟಿಇಮ್ಯೂನ್ ಶಕ್ತಿ ಇರುವುದಾಗಿ ಹೇಳಲಾಗಿದೆ. ಸಾಮಾನ್ಯವಾಗಿ ದೇಹಕ್ಕೆ ಯಾವುದೇ ವೈರಸ್ ಹೊಕ್ಕಿದಾಗ ದೇಹದಲ್ಲಿರುವ ಇಮ್ಯೂನ್ ಸಿಸ್ಟಮ್ ವೈರಸ್ ಅನ್ನು ಕೊಲ್ಲುವ ಪ್ರಯತ್ನ ಮಾಡುತ್ತದೆ. ಅದೇ ರೀತಿ ಕೆಲವು ಬಾರಿ ಈ ಇಮ್ಯೂನ್ ಸಿಸ್ಟಮ್ ನಮ್ಮ ದೇಹದ ಅಂಶಗಳನ್ನೇ ಕೊಲ್ಲಲಾರಂಭಿಸುತ್ತವೆ. ಆಗ ಅದಕ್ಕೆ ಆಯಂಟಿ ಇಮ್ಯೂನ್ ಶಕ್ತಿ ಎನ್ನಲಾಗುತ್ತದೆ. ಈ ಪ್ರಕರಣಗಳಲ್ಲೂ ಅದೇ ಆಗಿದೆ ಎಂದು ಹೇಳಲಾಗಿದೆ.