ತಿರುವನಂತಪುರ: ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಟಿಡಿಸಿ)ವು ಕೊರೋನಾ ಮಹಾಮಾರಿಯ ಇಂದಿನ ಸಂದರ್ಭದಲ್ಲಿ ವಾಹನಗಳ ಒಳಗೆ ಕುಳಿತು ಆಹಾರ ಸೇವಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಲಾಕ್‍ಡೌನ್‍ಗಳಿಗೆ ರಾಜ್ಯವು ರಿಯಾಯಿತಿ ನೀಡಿದೆ. ಆದರೆ ಹೋಟೆಲ್‍ಗಳಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶವನ್ನು ಇನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೆಟಿಡಿಸಿ ವಾಹನಗಳಲ್ಲಿ ಆಹಾರವನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಿದೆ.
ಇನ್-ಕಾರ್ ಡೈನಿಂಗ್ ಎಂದು ಕರೆಯಲ್ಪಡುವ ಈ ಯೋಜನೆಯು ಕೇರಳದ ರಸ್ತೆ ಬಳಕೆದಾರರಿಗೆ ಅನುಕೂಲವಾಗಲಿದೆ. ನೀವು ಹೋಟೆಲ್ ಮುಂದೆ ಆರ್ಡರ್ ನೀಡಿದರೆ, ಆಹಾರವನ್ನು ತಯಾರಿಸಿ ವಾಹನದೊಳಗೆ ತಲುಪಿಸಲಾಗುತ್ತದೆ. ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಹೋಟೆಲ್‍ನಲ್ಲಿ ಮಾಡಲಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನವನ್ನು ಈ ರೀತಿ ತಯಾರಿಸಲಾಗುತ್ತದೆ. ಆಯ್ದ ಕೆಟಿಡಿಸಿ ಆಹಾರ ರೆಸ್ಟೋರೆಂಟ್‍ಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಕೊರೋನಾದಿಂದಾಗಿ ಕುಸಿದಿದ್ದ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಹೊಸ ಯೋಜನೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಜ್ ಹೇಳಿದ್ದಾರೆ. ಜನರು ರೆಸ್ಟೋರೆಂಟ್‍ಗಳಿಗೆ ಪ್ರವೇಶಿಸುವುದನ್ನು ತಡೆಯಲು ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಮೊಹಮ್ಮದ್ ರಿಯಾಜ್ ಹೇಳಿರುವರು. ಮೊಹಮ್ಮದ್ ರಿಯಾಜ್ ಮತ್ತು ಕಾಯಂಕುಳಂ ಶಾಸಕ ಯು ಪ್ರತಿಭಾ ಅವರು ಕಾರಿನ ಕುಳಿತು ಆಹಾರ ಸೇವಿಸಲು ಚಾಲನೆ ನೀಡುವ ಮೂಲಕ ಹೊಸ ಅಧ್ಯಾಯವೊಂದು ತೆರೆದುಕೊಂಡಿತು.