ಮುಳ್ಳೇರಿಯ: ಗ್ರಾಮಾಭಿವೃಧ್ಧಿ ಇಲಾಖೆ ಮತ್ತು ಸ್ಟಾಟಿಸ್ಟಿಕ್ ಇಲಾಖೆಗಳು ಜಂಟಿಯಾಗಿ ಜಾರಿಗೊಳಿಸುವ ಈಸ್ ಆಫ್ ಲಿವಿಂಗ್ ಸರ್ವೇ ಮತ್ತು ಡಾಟಾ ಎಂಟ್ರಿ ಚಟುವಟಿಕೆಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸುವಲ್ಲಿ ಪ್ರಥಮ ಸ್ಥಾನವನ್ನು ಕಾರಡ್ಕ ಗ್ರಾಮ ಪಂಚಾಯತ್ ಪಡೆದಿದೆ.
ಕಾರಡ್ಕ ಬ್ಲಾಕ್ ಪಂಚಾಯತ್ ನಲ್ಲಿ ಜು.3ರಂದು ನಡೆಸಿದ ಬ್ಲೋಕ್ ಮಟ್ಟದ ಕಾರ್ಯಾಗಾರದಲ್ಲಿ ಸಮೀಕ್ಷೆ ಮೂಲಕ ಮೈಕ್ರೋ ಲೆವೆಲ್ ಪ್ಲಾನಿಂಗ್ ನಡೆಸಲಾಗಿದೆ. ನಂತರ ಗ್ರಾಮಪಂಚಾಯತ್ ಜು.5ರಂದು ಸಮೀಕ್ಷೆ ಆರಂಭಿಸಿತ್ತು. ಪಂಚಾಯತ್ ಆಡಳಿತೆ ಸಮಿತಿಯ ಆದೇಶ ಪ್ರಕಾರ ಅಂಗನವಾಡಿ ಶಿಕ್ಷಕಿಯರ, ಕಾರ್ಯಕರ್ತರ ಸೇವೆ ಬಳಸಿ ಸಮೀಕ್ಷೆ ನಡೆಸಲಾಗಿತ್ತು. ಜು.13ರಂದು ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗಿತ್ತು. ಜು.15ರಂದು 767 ಕುಟುಂಬಗಳ ಮಾಹಿತಿಗಳನ್ನು ತಾಲೂಕು ಸ್ಟಾಟಿಸ್ಟಿಕ್ಸ್ ಇನ್ವೆಸ್ಟಿಗೇಟರ್ ಹರಿಹರನ್ ಅವರು ಈಸ್ ಆಫ್ ಲಿವಿಂಗ್ ಸರ್ವೇಯ ಪೆÇೀರ್ಟಲ್ ನಲ್ಲಿ ನಮೂದಿಸಿದ್ದಾರೆ.
ಕಾರಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ಈಸ್ ಆಫ್ ಲಿವಿಂಗ್ ಸರ್ವೇ ಮಾಹಿತಿ ಸಂಗ್ರಹ ಮತ್ತು ಡಾಟಾ ಎಂಟ್ರಿ ಪೂರ್ಣಗೊಳಿಸಿದ ಪ್ರಥಮ ಗ್ರಾಮಪಂಚಾಯತ್ ಕಾರಡ್ಕ ಎಂಬುದನ್ನು ಜಿಲ್ಲಾ ಬಡತನ ನಿವಾರಣೆ ವಿಭಾಗ ಯೋಜನೆ ನಿರ್ದೇಶಕ ಕೆ.ಪ್ರದೀಪನ್ ಘೋಷಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ನ್ಯಾಯವಾದಿ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ವಿಸ್ತರಣೆ ಅಧಿಕಾರಿ ಶಾಂತಾ ಕುಮಾರಿ ವರದಿ ವಾಚಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಮುಹಮ್ಮದ್ ನಾಸರ್, ರತ್ನಾಕರ, ಸದಸ್ಯರಾದ ತಂಬಾನ್, ಸಂತೋಷ್ ಕುಮಾರ್, ಚಿತ್ರಕಲಾ, ಪ್ರಸೀಜಾ, ತಾಹಿರಾ, ರೂಪಾ ಸತ್ಯನ್, ಲೆಕ್ಕಾಧಿಕಾರಿ ಸತೀಶ , ನೌಕರಿ ಖಾತರಿ ಯೋಜನೆ ಘಟಕದ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿಯರು ಆನ್ ಲೈನ್ ಮೂಲಕ ಭಾಗವಹಿಸಿದ್ದರು. ಮುಹಮ್ಮದ್ ನಾಸರ್ ಸ್ವಾಗತಿಸಿದರು. ಗ್ರಾಮ ವಿಸ್ತರಣೆ ಅಧಿಕಾರಿ ಸೀನಿಯಾ ವಂದಿಸಿದರು.