ಕಾಸರಗೋಡು: ರಾಜ್ಯದಲ್ಲೇ ಪ್ರಥಮ ಬಾರಿಗೆ ಮೃಗಸಂರಕ್ಷಣೆ ಇಲಾಖೆಯ ಕಚೇರಿಗಳು ಇ-ಆಫೀಸ್ ಗಳಾಗುತ್ತಿರುವ ಹೆಗ್ಗಳಿಕೆ ಕಾಸರಗೋಡು ಜಿಲ್ಲೆಗೆ ಸಂದಿದೆ.
ಮೃಗಸಂರಕ್ಷಣೆ ಇಲಾಖೆ ವ್ಯಾಪ್ತಿಯಲ್ಲಿ ಕಚೇರಿಗಳು, ಗ್ರಾಮ ಪಂಚಾಯತ್ ಮಟ್ಟದ ಮೃಗಾಸ್ಪತ್ರೆಗಳು, ಪೆರ್ಲ, ಕುಂಜತ್ತೂರು ಚೆಕ್ ಪೆÇೀಸ್ಟ್ ಗಳು , ಬದಿಯಡ್ಕದ ಜಾನುವಾರು ಫಾರಂ ಸಹಿತ ಕಾಸರಗೋಡು ಜಿಲ್ಲೆಯ 50 ಸಂಸ್ಥೆಗಳು ಇ-ಆಫೀಸ್ ಗಳಾಗಿ ಮಾರ್ಪಾಡುಗೊಂಡಿವೆ. ಇದು ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿರುವ ವಿದ್ಯಮಾನವಾಗಿದೆ.
ಜಿಲ್ಲೆಯ ಗ್ರಾಮ ಪಂಚಾಯತ್ ಗಳ ನೆಟ್ ವರ್ಕ್ ಕನೆಕ್ಟಿವಿಟಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯದೊಂದಿಗೆ ಖಾಸಗಿ ಕಂಪನಿಗಳ ಇಂಟರ್ ನೆಟ್ ಕನೆಕ್ಟಿವಿಟಿ ಸಹಿತ ಆಯಾ ಪ್ರದೇಶಗಳಿಗೆ ಅನುಗುಣವಾದ ನೆಟ್ ವರ್ಕ್ ಸೌಲಭ್ಯ ಏರ್ಪಡಿಸಲಾಗುವುದು. ಇಲಾಖೆಯ ಕಚೇರಿಗಳು ಇ-ಆಫೀಸ್ ಗಳಾಗುವ ಮೂಲಕ ಕಡತಗಳನ್ನು ಸುಲಲಿತವಾಗಿ, ವೇಗವಾಗಿ ವಿಲೇವಾರಿ ಮಾಡಬಹುದಾಗಿದೆ. ಯೋಜನೆಗಳ ತ್ವರಿತ ಜಾರಿ ಸಂಬಂಧ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾನಿಟರಿಂಗ್ ನಡೆಸಲೂ ಸಧ್ಯವಾಗಲಿದೆ. ಸಾರ್ವಜನಿಕರು ಪತ್ರ, ಅರ್ಜಿ ಇತ್ಯಾದಿಗಳನ್ನು ಇ-ಮೇಲ್ ಮೂಲಕ ಸಲ್ಲಿಸಬಹುದು. ಕಡತಗಳನ್ನು ಟ್ರಾಕ್ ನಡೆಸಲೂ ಸಾಧ್ಯವಾಗಲಿದೆ. ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೂ ಸುಲಭವಾಗಲಿದೆ.
ಕಾಸರಗೋಡು ಜಿಲ್ಲೆಯ ಮೃಗಸಂರಕ್ಷಣೆ ಕಚೇರಿಗಳನ್ನು ಇ-ಆಫೀಸ್ ಗಳಾಗಿ ಘೋಷಿಸುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೆರವೇರಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಮೃಗಸಂರಕ್ಷಣೆ ಇಲಾಖೆ ನಿರ್ದೇಶಕ ಡಾ.ಎಸ್.ಎಂ.ಸಾಬು, ಜಿಲ್ಲಾ ಮೃಗಸಂರಕ್ಷಣೆ ಅಧಿಕಾರಿ ಡಾ.ಪಿ.ನಾಗರಾಜ್, ಇ-ಆಫೀಸ್ ನೊಡೆಲ್ ಅಧಿಕಾರಿ ಡಾ.ಜಿ.ಎಂ.ಸುನಿಲ್, ಎ.ಡಿ.ಸಿ.ಪಿ. ಜಿಲ್ಲಾ ಸಂಚಾಲಕಿ ಡಾ.ಎಸ್.ಮಂಜು ಮೊದಲಾದವರು ಉಪಸ್ಥಿತರಿದ್ದರು.