ಕಾಸರಗೋಡು: ಕರ್ತವ್ಯದಲ್ಲಿ ಸಾಧನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಿಂದ ತೊಡಗಿ ಗ್ರಾಮ ಸಹಾಯಕ ವರೆಗಿನ ಸಿಬ್ಬಂದಿಗೆ ಕ್ಯಾಟಗರಿ ವಿಂಗಡಿಸಿ ಕಂದಾಯ ಪ್ರಶಸ್ತಿ ನೀಡಲಾಗುವುದು ಸಚಿವ ನ್ಯಾಯವಾದಿ ಕೆ.ರಾಜನ್ ತಿಳಿಸಿದರು.
ಇದಕ್ಕೆ ಪ್ರತ್ಯೇಕ ಮಾನದಂಡ ನಿಗದಿಪಡಿಸಲು ಲ್ಯಾಂಡ್ ರೆವೆನ್ಯೂ ಕಮೀಷನರ್ ರಿಗೆ ಕಂದಾಯ ಸೆಕ್ರೆಟರಿಯೇಟ್ ಆದೇಶಿಸಿದೆ. ಫೆ.24ರಂದು ಕಂದಾಯ ದಿನದಂದು ಪ್ರಶಸ್ತಿಗಳನ್ನು ಘೋಷಿಸಲಾಗುವುದು ಎಂದವರು ತಿಳಿಸಿದರು.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಿಬ್ಬಂದಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರಿಗೂ ಜಾಗ, ಎಲ್ಲ ಜಾಗಗಳಿಗೂ ದಾಖಲೆ ಪತ್ರ ಎಂಬ ಉದ್ದೇಶದೊಂದಿಗೆ ಕಂದಾಯ ಇಲಾಖೆ ಚಟುವಟಿಕೆ ನಡೆಸುತ್ತಿದೆ. 100 ದಿನಗಳ ಕ್ರಿಯಾ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ ತಿಂಗಳಲ್ಲಿ ಭೂಹಕ್ಕು ಪತ್ರಗಳ ವಿತರಣೆ ನಡೆಯಲಿದೆ. ಅಗತ್ಯದ ದಾಖಲಾತಿ ಹೊಂದಿರುವ ಅರ್ಜಿಗಳಿಗೆ ತ್ವರಿತಗತಿಯಲ್ಲಿ ಭೂಹಕ್ಕು ಪತ್ರ ಮಂಜೂರುಮಾಡಲಾಗುವುದು. ಎಲ್ಲ ಜಾಗಗಳಿಗೂ ದಾಖಲೆ ಪತ್ರ ಖಚಿತಪಡಿಸಲಾಗುವುದು. ಅನುಮತಿ ನೀಡಲು ಸಾಧ್ಯವಿರುವ ಎಲ್ಲ ಭೂಹಕ್ಕು ಪತ್ರಗಳನ್ನು ವಿತರಿಸುವುದು ರಾಜ್ಯ ಸರಕಾರದ ಉದ್ದೇಶ. ಜನಸಾಮಾನ್ಯರೊಂದಿಗೆ ಮಾನವೀಯ ನೆಲೆಯ ವ್ಯವಹಾರ ಖಚಿತಪಡಿಸಲಾಗುವುದು. ಅಕ್ರಮ ಸ್ವಾಧೀನ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಂದಾಯ ಸಿಬ್ಬಂದಿಗೆ ಆದೇಶ ನೀಡಿರುವುದಾಗಿ ಅವರು ಹೇಳಿದರು.
ಜಾಗದ ನೋಂದಣಿಯಿಂದ ಲೊಕೇಷನ್ ಸ್ಕೆಚ್ ವರೆಗಿನ ಕಂದಾಯ ನೋಂದಣಿ, ಸರ್ವೇ ಇಲಾಖೆಗಳ ಸದ್ರಿಯ ಪೆÇೀರ್ಟಲ್ ಗಳು, ತಾಂತ್ರಿಕ ವ್ಯವಸ್ಥೆಗಳು ಇತ್ಯಾದಿಗಳನ್ನು ಜೋಡಿಸಿ ಇಂಟಗ್ರೇಟೆಡ್ ಪೆÇೀರ್ಟಲ್ ಸಿದ್ಧಪಡಿಸಲಾಗುವುದು. ರಾಜ್ಯದ ಎಲ್ಲ ಗ್ರಾಮ ಕಚೇರಿಗಳನ್ನೂ, ಇ-ಆಫೀಸ್ ವ್ಯವಸ್ಥೆಗೆ ಮಾರ್ಪಡಿಸಲಾಗುವುದು. ಕಟ್ಟಡಗಳ ಸಹಿತ ಅಲ್ಲಿನ ಸೇವೆಗಳನ್ನೂ ಸ್ಮಾರ್ಟ್ ಆಗಿಸಲಾಗುವುದು. ಇವುಗಳ ಚಟುವಟಿಕೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ 2 ತಿಂಗಳಿಗೊಮ್ಮೆ ತಹಸೀಲ್ದಾರರ, ಗ್ರಾಮಾಧಿಕಾರಿಗಳ ಸಭೆ, ಪ್ರತಿ ತಿಂಗಳು ಜಿಲ್ಲಾಧಿಕಾರಿ, ಉಪಜಿಲ್ಲಾಧಿಕಾರಿ , ವಲಯ ಕಂದಾಯಾಧಿಕಾರಿ, ಸಹಾಯಕ ಜಿಲ್ಲಾಧಿಕಾರಿಗಳು ಮೊದಲಾದವರ ಸಭೆ ಸಚಿವರ ಸಮಕ್ಷದಲ್ಲಿ ನಡೆಯಲಿದೆ. ಎಲ್ಲ ಗ್ರಾಮ ಕಚೇರಿಗಳೂ ಒಂದು ವರ್ಷದ ಅವಧಿಯಲ್ಲಿ ಐ.ಎಸ್.ಒ. ಸರ್ಟಿಫಿಕೆಟ್ ಲಭ್ಯವಾಗುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಚುರುಕು ಗೊಳಿಸಲಾಗುವುದು ಎಂದು ನುಡಿದರು.
ಕಂದಾಯ ಸಿಬ್ಬಂದಿಗೆ ಐ.ಎಲ್.ಡಿ.ಎಂ. ನೊಂದಿಗೆ ಕೈಜೋಡಿಸಿ ಕಾಲಾನುಸಾರ ತರಬೇತಿ ನೀಡಲಾಗುವುದು. ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗೆ ಸಂಶಯ ನಿವಾರಣೆ, ಮಾಹಿತಿ ಲಭಿಸುವ ನಿಟ್ಟಿನಲ್ಲಿ ಟಾಲ್ ಫ್ರೀ ನಂಬ್ರ ಸಿದ್ಧಗೊಳಿಸಲಾಗುವುದು. ಈ ಸಂಬಂಧ ಕ್ರಮಗಳು ಅಂತಿಮ ಹಂತದಲ್ಲಿವೆ. ಸಿಬ್ಬಂದಿಯ ಕೊರತೆ ಪರಿಹರಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತಿಳಿಸಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಅತುಲ್ ಎಸ್. ನಾಥ್, ಸರ್ವೇ ಡೆಪ್ಯೂಟಿ ಡೈರೆಕ್ಟರ್ ಸುನಿಲ್ ಜೋಸೆಫ್ ಪೆನಾರ್ಂಡಿಸ್, ಸಹಾಯಕ ಜಿಲ್ಲಾಧಿಕಾರಿಗಳಾದ ಕೆ.ರವಿಕುಮಾರ್, ಸಿರೋಜ್ ಪಿ.ಜಾನ್, ವಿ.ಸೂರ್ಯನಾರಾಯಣನ್, ಎ.ಸಾಜಿದ್, ಹಣಕಾಸು ಅಧಿಕಾರಿ ಕೆ.ಸತೀಶನ್, ತಹಸೀಲ್ದಾರರು ಮೊದಲಾದವರು ಉಪಸ್ಥಿತರಿದ್ದರು.